ತಾಕತ್ತು ತೋರಲು ಇದೇನೂ ಕುಸ್ತಿ ಅಖಾಡ ಅಲ್ಲ: ಬಿಜೆಪಿ ಸಚಿವ ಗರಂ
ನೆರೆ ಪರಿಹಾರದ ವಿಚಾರದಲ್ಲಿ ತಾಕತ್ತು ತೋರಲು ಇದು ಕುಸ್ತಿ ಅಖಾಡವಲ್ಲ ಎಂದು ಸಚಿವ ಸಿಸಿ ಪಾಟೀಲ್ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ದಾವಣಗೆರೆ [ಅ.04]: ನೆರೆ ಪರಿಹಾರದ ವಿಚಾರದಲ್ಲಿ ತಾಕತ್ತು ತೋರಿಸಲು ಇದೇನೂ ಕುಸ್ತಿ ಅಖಾಡ ಅಲ್ಲ, ಮೈದಾನವೂ ಅಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಅತಿವೃಷ್ಟಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ವಿಳಂಬ ಅನುಸರಿಸುತ್ತಿದೆಯೆಂದು ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲು ಆಡಳಿತ ಪಕ್ಷಕ್ಕೆ ತಾಕತ್ತಿಲ್ಲವೆಂಬ ವಿಪಕ್ಷಗಳು ಇದೇನೂ ಕುಸ್ತಿ ಮೈದಾನ ಅಲ್ಲ ಎಂಬುದನ್ನ ಅರಿಯಲಿ ಎಂದು ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ, ನೆರೆ ಸಂತ್ರಸ್ತರಿಗೆ ಮೊದಲ ಹಂತವಾಗಿ 10 ಸಾವಿರ ರು. ಪರಿಹಾರವನ್ನು ನೀಡಲಾಗಿದೆ. ಇದೀಗ ಮನೆಗಳು ಬಿದ್ದವರಿಗೆ ಮನೆ ಕಟ್ಟಿಕೊಳ್ಳಲು ಪ್ರಾಥಮಿಕವಾಗಿ 1 ಲಕ್ಷ ರು.ಗಳನ್ನು ಆಯಾ ಫಲಾನುಭವಿ ಖಾತೆಗೆ ಹಾಕಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೇಂದ್ರ ಸರ್ಕಾರ ಹಣ ಬರಲೆಂದು ರಾಜ್ಯ ಸರ್ಕಾರ ನಿರೀಕ್ಷೆಯಲ್ಲಿ ಕಾದು ಕುಳಿತಿಲ್ಲ. ನೆರೆ, ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ 15 ಸಾವಿರ ಕೋಟಿ ರು.ಗಳ ಪರಿಹಾರವನ್ನು ನೀಡಿದೆ. ಕೇಂದ್ರದ ಪರಿಹಾರ ಬರುವುದು ವಿಳಂಬವಾಗಿದೆ. ನಾವೂ ನಿರೀಕ್ಷೆಯಲ್ಲಿದ್ದೇವೆ. ಇದರಲ್ಲಿ ತಾಕತ್ತು ತೋರಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಿ.ಸಿ.ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.