ಭಾಗಮಂಡಲಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಅಂತಾರೆ. ದೇವಾಲಯ ಒಂದು ಪವಿತ್ರ ಸ್ಥಳ : ಸಚಿವ ಡಿಕೆಶಿ ಅಧಿಕಾರ ಹೋಗುತ್ತೆ ಅನ್ನೋದಿಕ್ಕೆ ನಾನು‌ ಹೆದರುವುದಿಲ್ಲ : ಸಿಎಂ ಕುಮಾರಸ್ವಾಮಿ

ಮಂಡ್ಯ[ಜು.20]: ಕೆಲವರು ದೇವಸ್ಥಾನಕ್ಕೆ ಹೋಗಲ್ಲ ಅಂತಾ ವಾದ ಮಾಡ್ತಾರೆ. ಧರ್ಮ ಕಾಪಾಡೋರಿಗೆ ಧರ್ಮ ಕಾಪಾಡುತ್ತೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲನ್ನು ಎಳೆದರು.

ಕೆಆರ್ ಎಸ್ ನಲ್ಲಿ ಮಾತನಾಡಿದ ಅವರು, ಭಾಗಮಂಡಲಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಅಂತಾರೆ. ದೇವಾಲಯ ಒಂದು ಪವಿತ್ರ ಸ್ಥಳ. ಸರ್ಕಾರದ ಪರವಾಗಿ, ನಿಮ್ಮೆಲ್ಲರ ಪರವಾಗಿ ಸಿಎಂ ಜೊತೆಯಲ್ಲಿ ಪೂಜೆ ಸಲ್ಲಿಸಿದ್ದೇವೆ. ಇದರಲ್ಲಿ ರಾಜಕೀಯ ಹಾಗೂ ವೈಯಕ್ತಿಕ ವಿಚಾರವೂ ಇಲ್ಲ ಎಂದರು.

ಕೊಡಗಿನ ದೇವತೆಯ ಆಶೀರ್ವಾದ ನನಗಿದೆ

ಕೊಡಗಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕೊಡಗಿನ‌ ತಲಕಾವೇರಿಗೆ ಬಂದರೆ ಅಧಿಕಾರ ಹೋಗುತ್ತೆ ಅನ್ನೋದಿಕ್ಕೆ ನಾನು‌ ಹೆದರುವುದಿಲ್ಲ. ನಾನು ಎಲ್ಲಿಯವರೆಗೂ ಅಧಿಕಾರದಲ್ಲಿರಬೇಕೆಂದು ತಾಯಿ ಚಾಮುಂಡೇಶ್ವರಿ ಹಾಗೂ ಕೊಡಗಿನ ದೇವತೆ ನಿರ್ಧರಿಸುತ್ತಾರೆ. ಇಬ್ಬರು ದೇವೆತೆಗಳ ಆಶೀರ್ವಾದ ನನಗಿದೆ. ಕೆಲವರು ನಮ್ಮ ಸರ್ಕಾರವನ್ನು ಅಭದ್ರಗೊಳಿಸುತ್ತಿದ್ದಾರೆ. ನನಗೆ ಅಧಿಕಾರ ಕಳೆದುಕೊಳ್ಳುವ ಆತಂಕವಿಲ್ಲ‌. ನನ್ನ ಅಧಿಕಾರವನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲಾಗ್ತಿಲ್ಲ ಎಂದು ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.

ಈ ಬಾರಿ ಕೆಆರ್ ಎಸ್ ತುಂಬಿರುವುದರಿಂದ ಮಂಡ್ಯ ಜಿಲ್ಲೆಯ ಜನರಿಗೆ ಭತ್ತ ಬೆಳೆಯಲು ಸೂಚಿಸಿದ್ದೇನೆ. ಕಾವೇರಿ ನದಿ ಭರ್ತಿಯಾಗಿರುವುದರಿಂದ ಎರಡು ರಾಜ್ಯದ ನಡುವೆ ಸಮಸ್ಯೆಗಳಿಲ್ಲ. ಈಗಾಗಲೇ ಎರಡು ರಾಜ್ಯದವರು ಕೇಂದ್ರದ ಮೂಲಕ ಮಾತುಕತೆ ನಡೆಸಿದ್ದೇವೆ‌. ಸರ್ಕಾರದ ಬಗ್ಗೆ ಯಾರಿಗೂ ಅನುಮಾನ‌ ಬೇಡ ಇದು ಸ್ಥಿರ ಸರ್ಕಾರವಾಗಿದೆ. ಸಂಪೂರ್ಣ ಸಾಲ ಮನ್ನಾಕ್ಕೆ ಕೂಡ ಇನ್ನು ಕೆಲವು ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.