ನವದೆಹಲಿ[ಜೂ.15]: ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ದೆಹಲಿಯ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಸ್ತಾಪಕ್ಕೆ ದೆಹಲಿ ಮೆಟ್ರೋ ರೈಲಿನ ರೂವಾರಿ ಇ.ಶ್ರೀಧರನ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಯೋಜನೆಗೆ ಅನುಮತಿ ನೀಡದಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಒಂದು ವೇಳೆ ದೆಹಲಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇರುವುದೇ ಹೌದಾಗಿದ್ದರೆ, ಸರ್ಕಾರ ನೇರವಾಗಿ ಮಹಿಳೆಯರಿಗೇ ಹಣ ಪಾವತಿ ಮಾಡಲಿ. ಅದು ಬಿಟ್ಟು ಮೆಟ್ರೋದಲ್ಲಿ ಉಚಿತ ಪ್ರಯಾಣದ ಆಫರ್‌ ನೀಡುವುದು ಸರಿಯಲ್ಲ. 2002ರಲ್ಲಿ ದೆಹಲಿಯಲ್ಲಿ ಮೊದಲ ಮೆಟ್ರೋ ಸೇವೆ ಆರಂಭವಾದಾಗಲೇ, ಇದರಲ್ಲಿ ಎಂದಿಗೂ ಯಾರಿಗೂ, ಉಚಿತ ಅಥವಾ ರಿಯಾಯಿತಿ ದರದ ಪ್ರಯಾಣದ ಅವಕಾಶ ನೀಡಬಾರದು ಎಂದು ನಿರ್ಧರಿಸಲಾಗಿತ್ತು.

ಒಂದು ವೇಳೆ ದೆಹಲಿಯಲ್ಲಿ ಉಚಿತ ಪ್ರಯಾಣದ ಕೆಟ್ಟಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಅದು ಇಡೀ ದೇಶದ ಇತರೆ ಮೆಟ್ರೋ ಸೇವೆಗಳ ಮೇಲೂ ಪರಿಣಾಮ ಬೀರಲಿದೆ. ದೆಹಲಿ ಮೆಟ್ರೋ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳೇ ಸ್ವತಃ ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗಿರುವಾಗ ಉಚಿತ ಪ್ರಯಾಣದ ಅವಕಾಶ ಸರಿಯಲ್ಲ. ಹೀಗಾಗಿ ಕೂಡಲೇ ತಾವು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ದೆಹಲಿ ಸರ್ಕಾರದ ಪ್ರಸ್ತಾಪವನ್ನು ಒಪ್ಪಬಾರದು’ ಎಂದು ಶ್ರೀಧರನ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

2020ರಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ನಡೆಯಲಿದೆ. ಹೀಗಾಗಿ ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಕೇಜ್ರಿವಾಲ್‌ ಅವರು ಕೆಲ ದಿನಗಳ ಹಿಂದೆ ಮೆಟ್ರೋ ಮತ್ತು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾಪ ಮುಂದಿಟ್ಟಿದ್ದರು.