* ಬೆಳಗಾವಿಯಲ್ಲಿ ಕನ್ನಡದ ಮುಂದೆ ನಡೆಯದ ಎಂಇಎಸ್​ ಆಟ* ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್​ ಕರಾಳ ದಿನ ಠುಸ್* ಕರಾಳ ದಿನದಲ್ಲೂ ಎಂಇಎಸ್​ ಭಿನ್ನಮತ; ಶಾಸಕ ಸಂಭಾಜಿ ಪಾಟೀಲ್, ಕಿರಣ ಠಾಕೂರ್​, ಮನೋಹರ್​ ಮಧ್ಯೆ ಭಿನ್ನಮತ* ಕರಾಳ ದಿನ ರ್ಯಾಲಿಗೆ ನಿರೀಕ್ಷಿತ ಮಟ್ಟದಲ್ಲಿ ಸೇರದ ಜನ* ಕನ್ನಡ ರಾಜ್ಯೋತ್ಸವದಂದು ಕಿರಿಕ್​​ ಮಾಡುವ ಎಂಇಎಸ್ ಉದ್ದೇಶ ವಿಫಲ

ಬೆಳಗಾವಿ(ನ. 01): ಪ್ರತೀ ವರ್ಷ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಕ್ಯಾತೆ ತೆಗೆಯುವ ಎಂಇಎಸ್'ನ ಪ್ರಯತ್ನ ಈ ಬಾರಿ ವಿಫಲವಾಗಿದೆ. ಎಂಇಎಸ್'​​​​ನ 3 ಬಣಗಳು ನಗರದಲ್ಲಿಂದು ಪ್ರತ್ಯೇಕ ರ್ಯಾಲಿಗಳನ್ನು ನಡೆಸಿವೆ. ಈ ಕರಾಳ ದಿನಾಚರಣೆ ಪ್ರತಿಭಟನಾ ಮೆರವಣಿಗೆಯಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಭಾಗಿಯಾಗಿದ್ರು. ಈ ಮೂಲಕ ಕರ್ನಾಟಕಕ್ಕೆ ಟಾಂಗ್ ಕೊಡುವ ಎಂಇಎಸ್ ಪುಂಡರ ಕರಾಳ ದಿನಾಚರಣೆ ಠುಸ್ ಆಗಿದೆ.

ಇತ್ತೀಚೆಗೆ ಸಂಘಟನೆಯ ಕೆಲ ಯುವಕರು ಮರಾಠಿ ಭಾಷೆಯಲ್ಲಿ ಪ್ರೋಮೊವೊಂದನ್ನು ತಯಾರಿಸಿ, ಅದರಲ್ಲಿ ಮರಾಠಿಗರನ್ನು ಪ್ರಚೋದಿಸಿ, ಕನ್ನಡಿಗರನ್ನು ಕೆರಳಿಸುವಂತಹ ಸಂದೇಶವನ್ನು ಸಾರುವ ಮೂಲಕ ಮತ್ತೆ ಬೆಳಗಾವಿಯಲ್ಲಿ ಭಾಷಾ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ರು. ಆದ್ರೆ, ಇಂದು ಬೆಳಗಾವಿಯಲ್ಲಿ ಕನ್ನಡದ ಮುಂದೆ ಎಂಇಎಸ್​ ಆಟ ನಡೆದಿಲ್ಲ.

ಎಂಇಎಸ್ ಶಾಸಕ ಸಂಭಾಜಿ ಪಾಟೀಲ್, ಕಿರಣ ಠಾಕೂರ್​ ಮತ್ತು ಮನೋಹರ್​ ಮಧ್ಯೆ ಭಿನ್ನಮತವಾಗಿದೆ. ಈ ಮೂರೂ ಮುಖಂಡರ ಬೆಂಬಲಿಗರು ಪ್ರತ್ಯೇಕವಾಗಿ ಹೋರಾಟ ಮಾಡಿದ್ದರಿಂದ ಕರಾಳ ದಿನಾಚರಣೆ ದುರ್ಬಲಗೊಂಡಿದೆ. ಕನ್ನಡ ರಾಜ್ಯೋತ್ಸವದಂದು ಕಿರಿಕ್​​ ಮಾಡುವ ಮರಾಠಿಗರ ಉದ್ದೇಶ ವಿಫಲವಾಗಿದೆ.

ಅಷ್ಟೇ ಅಲ್ಲ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸಲು ಬಿಡದ ಎಂಇಎಸ್ ಕಾರ್ಯಕರ್ತರ ಪ್ರಯತ್ನವೂ ವಿಫಲವಾಗಿದೆ. ಕರ್ನಾಟಕ ಕ್ರಾಂತಿ ಪಡೆ ಸಂಘಟನೆಯ ಕಾರ್ಯಕರ್ತರು ಪಾಲಿಕೆಯಲ್ಲಿ ಕನ್ನಡ ಧ್ವಜ ಹಾರಿಸಿ ಪುಂಡ ಮರಾಠಿಗರ ಸೊಕ್ಕಡಗಿಸಿದ್ದಾರೆ.