ಬೆಳಗಾವಿ[ಡಿ.10]: ಸುವರ್ಣ ವಿಧಾನಸೌಧದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ವಿರುದ್ಧವಾಗಿ ಸೋಮವಾರ ಕನ್ನಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಮಹಾಮೇಳಾವ್‌ ಆಯೋಜಿಸಿದೆ. ಜಿಲ್ಲಾಡಳಿತ ಈವರೆಗೆ ಇದಕ್ಕೆ ಅನುಮತಿ ನೀಡಿರದಿದ್ದರೂ ತಡರಾತ್ರಿ ವೇಳೆಗಾದರೂ ಅನುಮತಿ ಪಡೆಯುವ ವಿಶ್ವಾಸದಲ್ಲಿರುವ ಸಂಘಟಕರು ಮಹಾರಾಷ್ಟ್ರ ನಾಯಕರಿಗೂ ಆಹ್ವಾನ ನೀಡಿದ್ದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 5ರವರೆಗೆ ಮಹಾಮೇಳಾವ್‌ ನಡೆಯಲಿದ್ದು ಮಹಾರಾಷ್ಟ್ರದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಧನಂಜಯ ಮುಂಡೆ, ಸಂಸದ ಧನಂಜಯ ಮಹಾಡಿಕ, ಶಾಸಕ ಹಸನ ಮುಶ್ರಿಫ್‌, ಧೈರ್ಯಶೀಲ ಪಾಟೀಲ ಮತ್ತಿತರರು ಮಹಾಮೇಳಾವದಲ್ಲಿ ಪಾಲ್ಗೊಳ್ಳಲಿರುವುದಾಗಿ ಹೇಳಲಾಗಿತ್ತು. ಆದರೀಗ ಎಂಇಎಸ್ ಮಹಾಮೇಳಾವ್ ಗೆ ಸೇರದ ನಿರೀಕ್ಷಿತ ಜನ ಸೇರದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮಕ್ಕಳಿಗೇ ಟೋಪಿ ತೊಡಿಸಿ ಕೈಯ್ಯಲ್ಲಿ ಧ್ವಜ ಕೊಟ್ಟು ಕುಳ್ಳಿರಿಸಿಕೊಂಡಿದ್ದಾರೆ. ಪ್ರತಿಭಟನೆಗೆಂದು ತರಿಸಲಾಗಿದ್ದ ಸಾವಿರಾರು ಕುರ್ಚಿಗಳು ಖಾಲಿ ಹೊಡೆಯಲಾರಂಭಿಸಿವೆ.

ಬಿಜೆಪಿ ಸೇರ್ತಾರಾ ಎಂಇಎಸ್ ಮಾಜಿ ಶಾಸಕ

ಒಂದೆಡೆ ಅಧಿವೇಶನ  ವೇಳೆ ರಾಜ್ಯ ಸರ್ಕಾರದ ವಿರುದ್ಧ ನಡೆಸಬೇಕಿದ್ದ ಮಹಾಮೇಳಾವ್ ಗೆ ವಿಫಲವಾಗಿದ್ದರೆ, ಮತ್ತೊಂದೆಡೆ ಖಾನಾಪುರ ಕ್ಷೇತ್ರದ  ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಬಿಜೆಪಿ ಸೇರುತ್ತಾರೆಂಬ ಮಾತುಗಳು ಭಾರೀ ಹೊಡೆತ ನೀಡಿದೆ. ಭಾನುವಾರ ರಾತ್ರಿ ಬೆಳಗಾವಿಯ ಪಾರಥ ಕಾರ್ನರ್ ನಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ  ಆರ್ ಅಶೋಕ ರನ್ನ ರಹಸ್ಯ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ ಆದರೆ ಎಂಇಎಸ್ ಪಕ್ಷಕ್ಕಿದು ನುಂಗಲಾರದ ತುತ್ತಾಗಿದೆ.