Asianet Suvarna News Asianet Suvarna News

ಮೇಕೆದಾಟಿನಲ್ಲಿ ಡ್ಯಾಂ : ತಮಿಳು ನಾಡಿಗೆ ಹೆಚ್ಚು ಅನುಕೂಲ

ತಮಿಳುನಾಡು ಸರ್ಕಾರದೊಂದಿಗೆ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿ ಯೋಜನೆ ಜಾರಿ ಮಾಡುವುದು ನನ್ನ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೇ ಇದರಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. 

Mekedatu Dam Project More HelpFul For Tamilnadu
Author
Bengaluru, First Published Sep 9, 2018, 8:01 AM IST

ಬೆಂಗಳೂರು : ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ನೆರವಾಗಲಿದ್ದು, ವಿನಾ ಕಾರಣ ವಿವಾದ ಮಾಡುತ್ತಿದೆ. ಆದರೆ, ತಮಿಳುನಾಡು ಸರ್ಕಾರದೊಂದಿಗೆ ಚರ್ಚಿಸಿ ಯೋಜನೆ ಜಾರಿ ಮಾಡುವುದು ನನ್ನ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುವರ್ಣನ್ಯೂಸ್‌ನಲ್ಲಿ ಶನಿವಾರ ನಡೆದ ‘ಹಲೋ ಮಿನಿಸ್ಟರ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಯೋಜನೆಯಿಂದಾಗಿ ತಮಿಳುನಾಡಿಗೆ ಶೇ.70 ಮತ್ತು ಕರ್ನಾಟಕಕ್ಕೆ ಶೇ.30 ರಷ್ಟುಲಾಭವಾಗಲಿದ್ದು, ತಮಿಳುನಾಡು ಸರ್ಕಾರದæೂಂದಿಗೆ ಶೀಘ್ರದಲ್ಲಿ ಚರ್ಚೆಸಿ ಯೋಜನೆ ಕಾರ್ಯಾರಂಭ ಮಾಡಲಾಗುವುದು ಎಂದರು.

ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಖುದ್ದು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈ ಸಂಬಂಧ ಕೇಂದ್ರಕ್ಕೆ ವರದಿ ಸಲ್ಲಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಮೇಕೆದಾಟುವಿನಲ್ಲಿ ಸುಮಾರು 660 ಮೀಟರ್‌ ಎತ್ತರದ ಅಣೆಕಟ್ಟು ನಿರ್ಮಾಣವಾಗಲಿದೆ. ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿ ಸೇರಿ 4,996 ಎಕರೆ ಜಮೀನು ಮುಳುಗಡೆಯಾಗಲಿದೆ. ಅಣೆಕಟ್ಟು ನಿರ್ಮಾಣ ಮಾಡುವುದರಿಂದ ವಿದ್ಯುತ್‌ ಉತ್ಪಾದನೆಗೆ ನೆರವಾಗಲಿದೆ. ಜೊತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ಒದಗಿಸಬಹುದು. ಅಲ್ಲದೆ, ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದು ನ್ಯಾಯಾಲಯದ ಆದೇಶದಂತೆ ತಮಿಳು ನಾಡಿಗೆ ಹರಿಸಲು ನೆರವಾಗಲಿದೆ ಎಂದು ಹೇಳಿದರು.

ಕಳಸಾ- ಬಂಡೂರಿ ಬಗ್ಗೆ ಸರ್ವಪಕ್ಷ ಸಭೆ:  ಕಳಸಾ ಬಂಡೂರಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ತೀರ್ಪು ಹೆಚ್ಚು ಸಂತಸ ನೀಡಿಲ್ಲ. ಈ ಸಂಬಂಧ ಶೀಘ್ರದಲ್ಲಿ ಸರ್ವಪಕ್ಷ ಸಭೆ ಕರೆದು ನ್ಯಾಯಾಧಿಕರಣ ಆದೇಶ ಪ್ರಶ್ನಿಸುವ ಕುರಿತು ನಿರ್ಧರಿಸಲಾಗುವುದು. ಅಲ್ಲದೆ, ಈಗ ಲಭ್ಯವಾಗಿರುವ ನೀರನ್ನು ವ್ಯರ್ಥವಾಗದಂತೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನಲ್ಲಿರುವ ಮಂಗಳಾ ಅಣೆಕಟ್ಟೆಗೆ ಹೇಮಾವತಿ ನದಿಯಿಂದ ನೀರು ಹರಿಸುವ ಸಂಬಂಧ ಮುಂದಿನ 15 ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು. ಹೇಮಾವತಿ ನದಿಯಿಂದ 2.5 ಟಿಎಂಸಿ ನೀರು ಹರಿಸಲು ಕಳೆದ 40 ವರ್ಷಗಳ ಹಿಂದೆ ಅಣೆಕಟ್ಟೆನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ ಐದು ವರ್ಷಗಳಿಂದ ನೀರು ಬಂದಿಲ್ಲ ಎಂಬುದರ ಬಗ್ಗೆ ಮಾಹಿತಿಯಿದೆ. ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಕೆಲ ವಿದೇಶಿ ಕಂಪೆನಿಗಳು ಬಂದಿದ್ದವು. ಹೂಳಿನಲ್ಲಿ ಕಬ್ಬಿಣಾಂಶ ಇದೆ ಎಂದು ಕೆಲ ಸ್ಟೀಲ್‌ ಕಂಪೆನಿಗಳು ಮುಂದಾಗಿದ್ದವು. ಆದರೆ, ಕಾರಣಾಂತರಗಳಿಂದ ಸ್ಥಗಿತವಾಗಿದೆ. ಆದ್ದರಿಂದ ಜಲಾಶಯದ ಬಳಿಯ ನವಿಲೆ ಎಂಬಲ್ಲಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡಿ ಬಳಿಕ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ರೈತರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಹಲವು ನದಿಗಳಿದ್ದು, ಕೃಷ್ಣ, ಆಲಮಟ್ಟಿಮತ್ತು ನಾರಾಯಣಪುರ ಅಣೆಕಟ್ಟು ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತವೆ. ಈ ಎಲ್ಲಾ ನದಿಗಳಲ್ಲಿನ ಹೂಳು ತೆಗೆಯುವುದು ಹಾಗೂ ಎತ್ತರಿಸಲು ಬಜೆಟ್‌ ಕೊರತೆಯಿದೆ. ಆಧ್ಯತೆಯ ಮೇರೆಗೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕನಕಪುರ ನನ್ನ ರಾಜಕೀಯ ಕ್ಷೇತ್ರವಾಗಿದೆ. ನನ್ನ ಅವಧಿಯಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದೇನೆ. ಪ್ರಸಕ್ತ ಅಭಿವೃದ್ಧಿಹೊಂದಿರುವ ಜಿಲ್ಲೆಯಾಗಿದೆ. ಆದರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಜೊತೆಗೆ ನನ್ನ ಕ್ಷೇತ್ರದ ಜನತೆಯ ಆಸ್ತಿಗೆ ಹೆಚ್ಚಿನ ಮೌಲ್ಯ ಲಭ್ಯವಾಗುವಂತೆ ಮಾಡುವುದು ನನ್ನ ಪ್ರಮುಖ ಉದ್ದೇಶ ಎಂದರು.

Follow Us:
Download App:
  • android
  • ios