‘ಮೀಸಲು ವರ್ಗ ಶೇ.49.5 ಹಾಗೂ ಸಾಮಾನ್ಯ ವರ್ಗ ಶೇ.50.5 ಮೀಸಲು ಪಡೆಯಲಿವೆ. ಇವುಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್‌ ನಡೆಯಲಿದೆ' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಚೆನ್ನೈ(ಜೂ.26): ವೈದ್ಯ ಮತ್ತು ದಂತವೈದ್ಯ ಕೋರ್ಸ್ಗಳಿಗೆ ಸಂಬಂಧಿಸಿದ ‘ನೀಟ್' ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಸರ್ಕಾರ ಹೊರಡಿಸಿದೆ. ಈ ಪ್ರಕಾರ ಶೇ.15ರಷ್ಟುಸೀಟು ಮೀಸಲಾತಿ ಹೊಂದಿರುವ ‘ಅಖಿಲ ಭಾರತ ಕೋಟಾ'ದಲ್ಲಿ ಇನ್ನು ಮುಂದೆ ಸಾಮಾನ್ಯ ವರ್ಗ (ಜನರಲ್ ಕೆಟಗರಿ) ಹಾಗೂ ಮೀಸಲು (ರಿಸರ್ವಡ್) ವರ್ಗಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಯಲಿದೆ.
‘ಮೀಸಲು ವರ್ಗ ಶೇ.49.5 ಹಾಗೂ ಸಾಮಾನ್ಯ ವರ್ಗ ಶೇ.50.5 ಮೀಸಲು ಪಡೆಯಲಿವೆ. ಇವುಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಯಲಿದೆ' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಈವರೆಗೆ ಮೀಸಲು ವರ್ಗದ ವಿದ್ಯಾರ್ಥಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಷ್ಟೇ ಅಂಕ ಗಳಿಸಿದರೆ ಆತನಿಗೆ ಸಾಮಾನ್ಯ ವರ್ಗದಲ್ಲಿ ಸೀಟು ಲಭಿಸುತ್ತಿತ್ತು. ಇದರಿಂದ ಮೀಸಲು ವರ್ಗಕ್ಕೆ ಆ ವಿಭಾಗದಲ್ಲಿ ಒಂದು ಹೆಚ್ಚುವರಿ ಸೀಟು ಲಭ್ಯವಾದಂತಾಗುತ್ತಿತ್ತು. ಜೊತೆಗೆ ಸಾಮಾನ್ಯ ವರ್ಗಕ್ಕೆ ಒಂದು ಸೀಟು ತಪ್ಪುತ್ತಿತ್ತು. ಆದರೆ, ಸರ್ಕಾರದ ಈ ಆದೇಶದಿಂದಾಗಿ ಉತ್ತಮ ಅಂಕ ಗಳಿಸಿದ ಮೀಸಲು ವರ್ಗದ ವಿದ್ಯಾರ್ಥಿಗೆ ಸಾಮಾನ್ಯ ವರ್ಗದಲ್ಲಿ ಸೀಟು ಪಡೆಯುವ ಅವಕಾಶ ತಪ್ಪಿಹೋಗಲಿದೆ.
ನೀಟ್ನಲ್ಲಿ ರಾಜ್ಯ ಕೋಟಾದ ಅಡಿ ಶೇ.85 ಹಾಗೂ ಅಖಿಲ ಭಾರತ ಕೋಟಾದಡಿ ಶೇ.15 ಸೀಟು ಹಂಚಿಕೆಗೆ ಅವಕಾಶವಿದೆ. ಈಗ ಹೊರಡಿಸಿರುವ ಆದೇಶ ಅಖಿಲ ಭಾರತ ಕೋಟಾದ ಶೇ.15 ಸೀಟುಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಇದು 9,775 ಅಖಿಲ ಭಾರತ ಕೋಟಾ ಸೀಟುಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಸಚಿವಾಲಯದ ಅಧಿಕಾರಿಗಳು, ‘ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಕೇಂದ್ರ ಸರ್ಕಾರದ ಬಳಿ ಕೂಡಲೇ ಈ ಬಗ್ಗೆ ಸ್ಪಷ್ಟನೆ ಕೇಳಲಾಗುತ್ತದೆ' ಎಂದಿದ್ದಾರೆ.
