ಯಾವುದೇ ಬ್ಯಾಂಕ್‌'ಗಳು ನಾನು ಪಾವತಿ ಮಾಡಬೇಕಿರುವ ಹಣದ ಮೊತ್ತವನ್ನು ಹೇಳಿಲ್ಲ. ಅಲ್ಲದೇ ನಾನೇನು ದೇಶ ಬಿಟ್ಟು ಓಡಿಹೋಗಿಲ್ಲ.ವಿಜಯ್ ಮಲ್ಯ
ನವದೆಹಲಿ(ಜ.27): ತಮ್ಮನ್ನು ತಾವು ಮತ್ತೊಮ್ಮೆ ನಿರ್ದೋಷಿ ಎಂದು ಘೋಷಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಮಾಧ್ಯಮಗಳು ತಾವೇ ವಿಚಾರಣೆ ನಡೆಸಿ ನನ್ನನ್ನು ದೋಷಿ ಎಂದು ತೀರ್ಮಾನಿಸಿವೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ತಮ್ಮ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದ ಬಳಿಕ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಬಗ್ಗೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಲ್ಯ, ನಾನೇ ನೇರವಾಗಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿಲ್ಲ. ಕಿಂಗ್'ಫಿಶರ್ ಏರ್'ಲೈನ್ಸ್ ಸಂಸ್ಥೆ ಸಾಲ ಪಡೆದಿತ್ತು. ಕಿಂಗ್'ಫಿಶರ್ ಭಾರತೀಯರ ಪಾಲಿಗೆ ಒಂದು ದೊಡ್ಡ ಉಡುಗೊರೆಯಾಗಿತ್ತೇ ಹೊರತು, ಅದು ನನ್ನ ಆಟಿಕೆಯಾಗಿರಲಿಲ್ಲ.
ಮೇಲಾಗಿ ಯಾವುದೇ ಬ್ಯಾಂಕ್'ಗಳು ನಾನು ಪಾವತಿ ಮಾಡಬೇಕಿರುವ ಹಣದ ಮೊತ್ತವನ್ನು ಹೇಳಿಲ್ಲ. ಅಲ್ಲದೇ ನಾನೇನು ದೇಶ ಬಿಟ್ಟು ಓಡಿಹೋಗಿಲ್ಲ. ನಾನು 1998ರಿಂದಲೇ ಅನಿವಾಸಿ ಭಾರತೀಯ. ಹೀಗಾಗಿ ಲಂಡನ್'ಗೆ ಹೋಗಿ ನೆಲೆಸಿದ್ದು ಏಕಾಏಕಿ ಕೈಗೊಂಡ ನಿರ್ಧಾರವಲ್ಲ ಎಂದು ತಾವು ಪರಾರಿಯಾದ ಘಟನೆಯನ್ನು ಬೇರೆ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
