Asianet Suvarna News Asianet Suvarna News

ಚಿತ್ರರಂಗದ ಹಿರಿಯರ ಬಗ್ಗೆ ಶ್ರುತಿ ಪತ್ರ : ಅದರಲ್ಲಿರೋದೇನು..?

ಕಿರುಕುಳದ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಕ್ಕೆ ತಮ್ಮ ವಿರುದ್ಧವೇ ಚಿತ್ರರಂಗದ ಹಿರಿಯರು ಆರೋಪ ಮಾಡುತ್ತಿರುವುದಕ್ಕೆ ನಟಿ ಶ್ರುತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Me Too Sruthi Hariharan UnHappy Over Sandalwood Seniors
Author
Bengaluru, First Published Oct 25, 2018, 9:35 AM IST
  • Facebook
  • Twitter
  • Whatsapp

ಬೆಂಗಳೂರು :   ಲೈಂಗಿಕ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡ ನಮ್ಮಂತಹ ನಟಿಯರ ಪರ ನಿಲ್ಲುವ ಬದಲು ನೀವೆಲ್ಲಾ ಟೀವಿ ಚಾನಲ್‌ಗಳಲ್ಲಿ ನಮ್ಮ ವಿರುದ್ಧವೇ ಆರೋಪ ಮಾಡುತ್ತಿರುವುದನ್ನು ಕೇಳಿ ನನಗೆ ಗಾಬರಿಯಾಗಿದೆ ಎಂದು ನಟಿ ಶ್ರುತಿ ಹರಿಹರನ್‌ ಅವರು ಚಿತ್ರರಂಗದ ಹಿರಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡ ನನ್ನ, ಸಂಗೀತಾ ಭಟ್‌, ಸಂಜನಾ ಗಲ್ರಾಣಿ, ಏಕ್ತಾ ಮುಂತಾದವರ ಪರವಾಗಿ ನಿಲ್ಲುವ ಬದಲಾಗಿ ನೀವೆಲ್ಲಾ ಚಾನೆಲ್‌ಗಳಲ್ಲಿ ನಮ್ಮ ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ನನ್ನನ್ನು ಗಾಬರಿಗೊಳಿಸಿದೆ ಎಂದು ಅವರು ನಿರ್ಮಾಪಕ ಮುನಿರತ್ನ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರನ್ನು ಉದ್ದೇಶಿಸಿ ಟ್ವೀಟರ್‌ನಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ನಟ ಅರ್ಜುನ್‌ ಸರ್ಜಾ ವಿರುದ್ಧ ತಾವು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಕುರಿತು ಕೆಲ ಸ್ಪಷ್ಟನೆಯನ್ನೂ ನೀಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ಹಿರಿಯರು ಕಲಾವಿದರ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಶ್ರುತಿ ಹರಿಹರನ್‌ ಪತ್ರದ ಸಾರಾಂಶ:

1. ನಾನು ಅರ್ಜುನ್‌ ಸರ್ಜಾ ವಿರುದ್ಧ ಆರೋಪ ಮಾಡಿದ್ದು ನನ್ನ ಸ್ವಂತ ಇಚ್ಛೆಯಿಂದ. ಚಿತ್ರರಂಗದ ಮಂದಿ ಭಾವಿಸಿದಂತೆ ಅಥವಾ ಹೇಳಿದಂತೆ ನನ್ನ ಹಿಂದೆ ಬೇರೆ ಯಾರೂ ಇಲ್ಲ. ಚೇತನ್‌, ಪ್ರಕಾಶ್‌ ರೈ, ಕವಿತಾ ಲಂಕೇಶ್‌ ಇವರೆಲ್ಲಾ ಹೇಳಿಕೊಟ್ಟು ನಾನು ಆರೋಪ ಮಾಡಿದ್ದಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಆದರೆ ಅವರೆಲ್ಲಾ ನನ್ನ ಜೊತೆ ದೃಢವಾಗಿ ನಿಂತಿದ್ದಾರೆ. ಅದಕ್ಕೆ ನಾನು ಆಭಾರಿ.

2. ಈ ಆರೋಪದ ಸತ್ಯಾಸತ್ಯತೆ ತಿಳಿದಿರುವುದು ಇಬ್ಬರಿಗಷ್ಟೇ. ಒಂದು ನನಗೆ, ಇನ್ನೊಂದು ಅರ್ಜುನ್‌ ಸರ್ಜಾಗೆ. ನಾನು ಸದ್ಯ ಅರ್ಜುನ್‌ ಸರ್ಜಾ ವಿರುದ್ಧ ಆರೋಪ ಮಾಡಿದ್ದು, ಅವರು ನನ್ನ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದರೆ ಅದರ ವಿರುದ್ಧ ಕೋರ್ಟಲ್ಲಿ ಹೋರಾಡಲು ಸಿದ್ಧಳಿದ್ದೇನೆ.

3. ಈ ಕುರಿತಾಗಿ ಯಾರಿಗೂ ನಾನು ಸಾಕ್ಷ್ಯ ಒದಗಿಸುವ ಅಗತ್ಯವಿಲ್ಲ. ನಿಮಗೆ ಯಾರ ಪರ ನಿಲ್ಲಬೇಕೆನಿಸುತ್ತದೋ ಅವರ ಪರ ನಿಲ್ಲಬಹುದು. ಕೇಸು ಕೋರ್ಟಿಗೆ ಬಂದರೆ ನಾನು ಖಂಡಿತವಾಗಿಯೂ ಎಲ್ಲಾ ಸಾಕ್ಷ್ಯಗಳನ್ನೂ ಕೋರ್ಟಿಗೆ ಒದಗಿಸುತ್ತೇನೆ.

4. ಅವರ ಅಭಿಮಾನಿ ಬಳಗದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ವಿರುದ್ಧ ಕೆಟ್ಟಕೆಟ್ಟದಾಗಿ ಬರೆದವರಿಗೆ, ಮಾತನಾಡಿದವರಿಗೆ ನಾನು ಹೇಳುವುದಿಷ್ಟೇ- ನನ್ನ ಸತ್ಯ ನನಗೆ ಗೊತ್ತಿದೆ. ನಿಮಗೆ ಏನು ಮಾಡಬೇಕೆನ್ನಿಸುತ್ತದೋ ಅದನ್ನು ನೀವು ಮಾಡಿ, ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ.

5. ನನಗೆ ಯಾವುದು ಸರಿ ಅನ್ನಿಸುತ್ತದೋ ಅದರ ಪರವಾಗಿ ನಾನು ಹೋರಾಡುತ್ತೇನೆ. ಇದು ಸುದೀರ್ಘ ಯುದ್ಧವೆಂದು ನನಗೆ ಗೊತ್ತಿದೆ ಮತ್ತು ಅದಕ್ಕೆ ನಾನು ಸಿದ್ಧಳಾಗಿದ್ದೇನೆ.

Follow Us:
Download App:
  • android
  • ios