ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ, ರಾಷ್ಟ್ರೀಯ ಅಲ್ಪಸಂಖ್ಯಾತರ ಸ್ಥಾನ ಮಾನ ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಕೋಡ್‌/ಕಾಲಂ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ್ದ ಪತ್ರಕ್ಕೆ ನಾನು ಹಾಗೂ ನನ್ನಂತೆ ಹಲವಾರು ಜನಪ್ರತಿನಿಧಿಗಳು ಸಹಿ ಮಾಡಿದ್ದಾರೆ. 

ಬೆಂಗಳೂರು(ಆ.01): ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ವೀರಶೈವ- ಲಿಂಗಾಯತ ಒಗ್ಗೂಡಿ ಸ್ವತಂತ್ರ ಧರ್ಮವಾಗಬೇಕೆಂಬ ಮನವಿಗೆ ಸಹಿ ಹಾಕಿ ತಪ್ಪು ಮಾಡಿದ್ದೇನೆ. ಕೇವಲ ಲಿಂಗಾಯತ ಧರ್ಮ ಮಾತ್ರವೇ ಸ್ವತಂತ್ರ ಧರ್ಮವಾಗಬೇಕೆಂದು ಪತ್ರ ಬರೆದಿದ್ದಾರೆ. ಈ ಮೂಲಕ ವೀರಶೈವ ಮತ್ತು ಲಿಂಗಾಯತ ನಡುವೆ ಮತ್ತಷ್ಟು ಕಿಡಿ ಹಚ್ಚಿಸಿದ್ದಾರೆ.

‘ಲಿಂಗಾಯತ ಪ್ರತ್ಯೇಕ ಧರ್ಮ ಬೇಕು’

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ, ರಾಷ್ಟ್ರೀಯ ಅಲ್ಪಸಂಖ್ಯಾತರ ಸ್ಥಾನ ಮಾನ ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಕೋಡ್‌/ಕಾಲಂ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ್ದ ಪತ್ರಕ್ಕೆ ನಾನು ಹಾಗೂ ನನ್ನಂತೆ ಹಲವಾರು ಜನಪ್ರತಿನಿಧಿಗಳು ಸಹಿ ಮಾಡಿದ್ದಾರೆ. ಆದರೆ ನನಗೀಗ ಸಹಿ ಮಾಡಿರುವುದು ತಪ್ಪು ಎಂದು ಮನವರಿಕೆಯಾಗಿದೆ. ವೀರಶೈವ ಮಹಾಸಭೆಯವರು ಹಿಂದಿನ ಪ್ರಮಾದಗಳನ್ನು ಸರಿಪಡಿಸಿ, ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಸಿಗುವುದಿಲ್ಲ ಎಂಬ ಕಟು ಸತ್ಯವನ್ನು ಅರಿತುಕೊಂಡು ಇನ್ನು ಮುಂದಾದರೂ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅಥವಾ ವಿವಿಧ ವೇದಿಕೆಗಳಿಗೆ ಲಿಂಗಾಯತ ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಒತ್ತಾಸೆಯನ್ನು ಮಾಡಬೇಕು.

ಲಿಂಗಾಯತ ಮಾತ್ರವೇ ಪ್ರತ್ಯೇಕ ಧರ್ಮವಾಗಬೇಕೆಂದಿರುವ ಪಾಟೀಲರು, ಇದಕ್ಕಾಗಿ ಪಂಚಪೀಠಾಧೀಶ್ವರರು, ಮಠಾಧೀಶರು ಹಾಗೂ ವೀರಶೈವ ಹಾಗೂ ಲಿಂಗಾಯತರ ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನಿಸಬೇಕೆಂದು ಶಾಮನೂರು ಶಿವಶಂಕರಪ್ಪಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದ್ರೆ ಎಂ.ಬಿ ಪಾಟೀಲ್ ಅವ್ರಿಂದ ನನಗೆ ಯಾವುದೇ ಪತ್ರ ಬಂದಿಲ್ಲ ಅಂತಾ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. ಪಾಟೀಲರ ಪತ್ರಕ್ಕೆ ಬಿಜೆಪಿ ನಾಯಕರು ದಿವ್ಯಮೌನಕ್ಕೆ ಶರಣಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಯಾವುದೇ ಹೇಳಿಕೆ ನೀಡದಂತೆ ರಾಜ್ಯ ಬಿಜೆಪಿ, ಪಕ್ಷದ ನಾಯಕರಿಗೆ ಸೂಚಿಸಿದೆ. ಈ ಮೂಲಕ ಸೂಕ್ತ ಸಮಯದಲ್ಲಿ ಪ್ರತ್ಯೇಕ ಧರ್ಮದ ಏಟಿಗೆ ತಿರುಗೇಟು ನೀಡಲು ಮುಂದಾಗಿದೆ.

ಇನ್ನೂ ಮಾತೆ ಮಹಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ರಂಭಾಪುರಿ ಶ್ರೀಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಬಿ.ಎಸ್ ಗೌಡ ಎಂಬುವರು, ರಂಭಾಪುರಿ ಶ್ರೀಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ವರದಿ: ವೀರೇಂದ್ರಉಪ್ಪುಂದ, ಸುವರ್ಣನ್ಯೂಸ್