2019 ರ ಲೋಕಸಭಾ ಚುನಾವಣೆ ನಂತರ ಕಿಂಗ್‌ಮೇಕರ್ ಆಗಲು ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ಇದ್ದು ಮಾಯಾವತಿ ಹೇಗಾದರೂ ಮಾಡಿ ಮಮತಾ ಬ್ಯಾನರ್ಜಿ, ಜಗನ್ ರೆಡ್ಡಿ, ಸ್ಟಾಲಿನ್ ಮತ್ತು ಚಂದ್ರಶೇಖರ್ ರಾವ್‌ಗಿಂತ ಹೆಚ್ಚು ಸ್ಥಾನ ಪಡೆಯಲು ತಂತ್ರ ರೂಪಿಸುತ್ತಿದ್ದಾರೆ.
ನವದೆಹಲಿ (ಆ. 28): 2019 ರ ಲೋಕಸಭಾ ಚುನಾವಣೆ ನಂತರ ಕಿಂಗ್‌ಮೇಕರ್ ಆಗಲು ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ಇದ್ದು ಮಾಯಾವತಿ ಹೇಗಾದರೂ ಮಾಡಿ ಮಮತಾ ಬ್ಯಾನರ್ಜಿ, ಜಗನ್ ರೆಡ್ಡಿ, ಸ್ಟಾಲಿನ್ ಮತ್ತು ಚಂದ್ರಶೇಖರ್ ರಾವ್‌ಗಿಂತ ಹೆಚ್ಚು ಸ್ಥಾನ ಪಡೆಯಲು ತಂತ್ರ ರೂಪಿಸುತ್ತಿದ್ದಾರೆ.
ಕಳೆದ ವಾರ ಕಾಂಗ್ರೆಸ್ ಖಜಾಂಚಿ ಅಹ್ಮದ್ ಪಟೇಲ್ ಬಳಿ ತನ್ನ ಪರಮಾಪ್ತ ಸತೀಶ್ ಚಂದ್ರ ಮಿಶ್ರಾರನ್ನು ಕಳುಹಿಸಿದ್ದ ಮಾಯಾವತಿ ಹೊಸದೊಂದು ಆಫರ್ ಇಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 12 ಸೀಟ್ ಬಿಟ್ಟುಕೊಡಲು ಒಪ್ಪಿಕೊಂಡಿರುವ ಮಾಯಾವತಿ, ಇದಕ್ಕೆ ಬದಲಾಗಿ ರಾಜಸ್ಥಾನ, ಹರಿಯಾಣ, ಪಂಜಾಬ್, ಚತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 25 ರಿಂದ 30 ಸೀಟ್‌ಗಳನ್ನು ಬಿಟ್ಟುಕೊಡುವಂತೆ ಕೇಳಿದ್ದಾರೆ.
ಇದಕ್ಕೆ ಒಪ್ಪಿಕೊಂಡರೆ ಮಾತ್ರ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗೆ ವಿಧಾನಸಭೆಯಲ್ಲಿ ಮೈತ್ರಿ ಎಂದು ಮಾಯಾವತಿ ಷರತ್ತು ಬೇರೆ ಇಟ್ಟಿದ್ದಾರೆ. ಆದರೆ ಅಹ್ಮದ್ ಪಟೇಲ್ ಇದಕ್ಕೆ ಹೌದು ಅಂತಾನೂ ಹೇಳಿಲ್ಲ, ಇಲ್ಲ ಎಂದು ಕೂಡ ಹೇಳಿಲ್ಲ. ರಾಹುಲ್ ಮತ್ತು ಸೋನಿಯಾ ಗಾಂಧಿ ಅವರೇ ಮೈತ್ರಿ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪಟೇಲ್, ಸತೀಶ್ ಚಂದ್ರಮಿಶ್ರಾರಿಗೆ ಹೇಳಿ ಕಳುಹಿಸಿದ್ದಾರೆ.
