"ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿ ವಿರುದ್ಧ ಪ್ರತೀ ತಿಂಗಳು ‘ಕರಾಳ ದಿನಾಚರಣೆ’ ಮಾಡಲಾಗುವುದು"- ಮಾಯಾವತಿ

ಲಖನೌ(ಮಾ.15): ಯಾವುದೇ ಪಕ್ಷದ ಗುರುತಿನ ಚಿಹ್ನೆ ಮುಂದಿನ ಗುಂಡಿ ಒತ್ತಿದರೂ ಬಿಜೆಪಿಗೆ ಮತ ವರ್ಗಾವಣೆ ಆಗುವಂತೆ ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ.

ಅಲ್ಲದೆ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿ ವಿರುದ್ಧ ಪ್ರತೀ ತಿಂಗಳು ‘ಕರಾಳ ದಿನಾಚರಣೆ’ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಅಪ್ರಾಮಾಣಿಕತೆ ಮತ್ತು ವಂಚನೆಯನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ನಾವು ಸಲ್ಲಿಸಿದ ದೂರಿಗೆ ಕೇಂದ್ರ ಚುನಾವಣೆ ಆಯೋಗ ಸಮಂಜಸ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಚುನಾವಣಾ ಅಕ್ರಮ ತಡೆಗೆ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಸುಪ್ರೀಂ ಕದ ತಟ್ಟಲು ನಿರ್ಧರಿಸಲಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಬಿಜೆಪಿ ವಿರುದ್ಧದ ಪ್ರತಿ ತಿಂಗಳ ಕರಾಳ ದಿನಾಚರಣೆಯನ್ನು ಉತ್ತರಪ್ರದೇಶ ಮತ್ತು ದೇಶದ ಇತರೆ ರಾಜ್ಯಗಳಿಗೂ ವಿಸ್ತರಿಸಿ, ಬಿಜೆಪಿಯ ಗೆಲುವಿನ ನಿಜಬಣ್ಣವನ್ನು ಬಹಿರಂಗಪಡಿಸುತ್ತೇವೆ ಎಂದು ಮಾಯಾ ಗುಡುಗಿದ್ದಾರೆ.