ಲಕ್ನೋ :  ಲಕ್ನೋ ಹಾಗೂ ನೋಯ್ಡಾದಲ್ಲಿ ತಮ್ಮ ಪಕ್ಷದ ಚಿಹ್ನೆಯಾದ ಆನೆ ಪ್ರತಿಮೆಯನ್ನು ನಿರ್ಮಾಣ ಮಾಡಲು ಉಪಯೋಗಿಸುತ್ತಿರುವ ಸಾರ್ವಜನಿಕ ಹಣವನ್ನು ಮರುಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ BSP ಮುಖಂಡೆ ಮಾಯಾವತಿಗೆ  ಸೂಚಿಸಿದೆ. 

ತಮ್ಮ ಸ್ವಂತ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಸಾರ್ವಜನಿಕ ಹಣದ ಬಳಕೆ ವಿರೋಧಿಸಿ ವಕೀಲರೋರ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹಣ ಮರುಪಾವತಿಸಲು ಆದೇಶಿಸಿದೆ. 

ಬಿಎಸ್ ಪಿ ಚಿಹ್ನೆಯಾದ ಆನೆಯ ಪ್ರತಿಮೆ ನಿರ್ಮಾಣ ಮಾಡಲು ಮಾಯಾವತಿ ಸಾರ್ವಜನಿಕರ ಹಣ ಬಳಕೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ತಿಳಿಸಿದೆ. 

ಮಾಯಾವತಿ ಪರ ವಕೀಲರು ಪ್ರಕರಣದ ಮುಂದಿನ ವಿಚಾರಣೆಯನ್ನು  ಮೇ ತಿಂಗಳಲ್ಲಿ ನಡೆಸುವಂತೆ ಕೇಳಿಕೊಂಡಿದ್ದರು. ಆದರೆ ವಿಚಾರಣೆಯನ್ನು ಏಪ್ರಿಲ್ 2ಕ್ಕೆ ನ್ಯಾಯಪೀಠ ಮುಂದೂಡಿ ಆದೇಶಿಸಿದೆ. . 

ಅಲ್ಲದೇ ಇದೊಂದು ಸೂಕ್ಷ್ಮ ವಿಚಾರವೇ ಆಗಿದ್ದು ಸೂಕ್ತ ಸಂದರ್ಭದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.