ಪ್ರಜ್ವಲ್ ಸೇರಿದಂತೆ ಪಕ್ಷ ಸಂಘಟನೆಗೆ ದುಡಿದ ಎಲ್ಲರಿಗೂ ಸ್ಪರ್ಧೆ ಮಾಡುವ ಆಸೆ ಇರುತ್ತದೆ. ನಮ್ಮ ಕುಟುಂಬದ ಪ್ರಜ್ವಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಲವರಿಗೆ ಆಸೆ ಇದೆ. ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದರೆ ಅವರನ್ನೇ ಕೇಳಿ’ ಎಂದು ಹೇಳಿರುವುದು ಕುಟುಂಬದಲ್ಲಿನ ಬೆಳವಣಿಗೆಗಳನ್ನು ಸೂಚಿಸುವಂತಿದೆ.
ಬೆಂಗಳೂರು/ಹಾಸನ(ನ.07): ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ತಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸಲಿದ್ದಾರೆ ಎಂದು ದೇವೇಗೌಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪದೇ ಪದೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಕುಟುಂಬದ ಆಂತರಿಕ ಬೆಳವಣಿಗೆಗಳನ್ನು ಗಮನಿಸಿದರೆ ಅವರ ಕೈಮೀರಿ ಅದು ನಾಲ್ಕಕ್ಕೆ ಬಂದು ನಿಲ್ಲುವ ಸಂದರ್ಭ ಎದುರಾಗುವ ಸಂಭವವಿದೆ.
ಹಾಲಿ ಶಾಸಕರೂ ಆಗಿರುವ ದೇವೇಗೌಡರ ಮಕ್ಕಳಾದ ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರಿಬ್ಬರು ಕಣಕ್ಕಿಳಿಯಲಿದ್ದಾರೆ. ಆದರೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಶಾಸಕಿಯೂ ಆಗಿರುವ ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸುವ ಪ್ರಯತ್ನ ತೆರೆಮರೆಯಲ್ಲಿ ಭರದಿಂದ ನಡೆದಿರುವ ಬೆನ್ನಲ್ಲೇ ರೇವಣ್ಣ ಪುತ್ರ ಪ್ರಜ್ವಲ್ ಕೂಡ ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಟ್ಟು ಹಿಡಿದಿದ್ದಾರೆ.
ಪ್ರಜ್ವಲ್ ಸ್ಪರ್ಧೆಗೆ ಗೌಡರ ಗ್ರೀನ್ ಸಿಗ್ನಲ್- ಭವಾನಿ
ಇದಕ್ಕೆ ಪೂರಕವಾಗಿ ಎಂಬಂತೆ ಮಾತನಾಡಿದ ರೇವಣ್ಣ ಪತ್ನಿ ಭವಾನಿ ಅವರು ಪುತ್ರ ಪ್ರಜ್ವಲ್ ರೇವಣ್ಣ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸೋಮವಾರ ಹಾಸನ ಜಿಲ್ಲೆ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ಮುಂದಿನ ಚುನಾವಣೆಯಲ್ಲಿ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡೋದು ಖಚಿತ. ಇದಕ್ಕೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಿದರು.
‘ಪ್ರಜ್ವಲ್ ಹಾಸನ ಜಿಲ್ಲೆಯ ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೇ ಎಂಬುದನ್ನು ಸಮೀಕ್ಷೆ ನಡೆಸಿ ದೇವೇಗೌಡರು ತೀರ್ಮಾನಿಸಲಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಾನೇನು ಮಾತನಾಡಲ್ಲ. ಚುನಾವಣೆಗೆ ನಿಲ್ಲುವುದು ಅವರಿಗೆ ಬಿಟ್ಟ ವಿಚಾರ. ಅಂತಿಮವಾಗಿ ಕುಟುಂಬದ ಹಿರಿಯರು ನಿರ್ಧರಿಸಲಿದ್ದಾರೆ’ ಎಂದರು.
ದೇವೇಗೌಡರನ್ನೇ ಕೇಳಿ- ಎಚ್‌ಡಿಕೆ
ಇದಕ್ಕೆ ನಂತರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಚುನಾವಣೆಗೆ ಯಾರು ನಿಲ್ಲಬೇಕು ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ. ಈ ಬಗ್ಗೆ ನಾನು, ರೇವಣ್ಣ, ದೇವೇಗೌಡರು ಹಲವು ಬಾರಿ ಹೇಳಿಕೆ ನೀಡಿದ್ದೇವೆ. ಪ್ರಜ್ವಲ್ ಸೇರಿದಂತೆ ಪಕ್ಷ ಸಂಘಟನೆಗೆ ದುಡಿದ ಎಲ್ಲರಿಗೂ ಸ್ಪರ್ಧೆ ಮಾಡುವ ಆಸೆ ಇರುತ್ತದೆ. ನಮ್ಮ ಕುಟುಂಬದ ಪ್ರಜ್ವಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಲವರಿಗೆ ಆಸೆ ಇದೆ. ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದರೆ ಅವರನ್ನೇ ಕೇಳಿ’ ಎಂದು ಹೇಳಿರುವುದು ಕುಟುಂಬದಲ್ಲಿನ ಬೆಳವಣಿಗೆಗಳನ್ನು ಸೂಚಿಸುವಂತಿದೆ.
ಸೂಕ್ತ ಸಂದರ್ಭದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ತೀರ್ಮಾನ ಮಾಡುವುದಾಗಿಯೂ ಅವರ ತಿಳಿಸಿದರು.
ಆರ್.ಆರ್.ನಗರದ ಮೇಲೆ ಪ್ರಜ್ವಲ್ ಕಣ್ಣು
ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಮೊಮ್ಮಗ ಪ್ರಜ್ವಲ್‌ನನ್ನು ಮುಂಬರುವ ೨೦೧೯ರ ಲೋಕಸಭಾ ಚುನಾವಣೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿ ಕಣಕ್ಕಿಳಿಸಲು ಆಸಕ್ತಿ ಇದ್ದರೂ ಪ್ರಜ್ವಲ್‌ಗೆ ಮಾತ್ರ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವ ಆಸೆಯಿರುವುದೇ ಈ ಬಿಕ್ಕಟ್ಟಿಗೆ ಮೂಲ ಕಾರಣ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗುವುದಿಲ್ಲ. ಕೆಲವು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲೇ ಅಂದರೆ, ವಿಧಾನಸಭೆ ಪ್ರವೇಶಿಸಿ ಕೆಲವರ್ಷಗಳ ನಂತರ ಲೋಕಸಭೆ ಪ್ರವೇಶಿಸುವ ಉದ್ದೇಶವನ್ನು ಪ್ರಜ್ವಲ್ ಹೊಂದಿದ್ದಾರೆ. ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲೇ ಹಾಸನ ಜಿಲ್ಲೆ ಬೇಲೂರಿನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರು. ನಂತರ ಅದಕ್ಕೆ ಗೌಡರ ಒಪ್ಪಿಗೆ ಸಿಗದೇ ಇದ್ದಾಗ ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದಿಂದ ಮುಂದಿನ ಬಾರಿ ಸ್ಪರ್ಧಿಸಲು ಸಜ್ಜಾಗಿ ಕೆಲಸ ಆರಂಭಿಸಿದ್ದರು.
ಆದರೆ, ಅಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಕಣಕ್ಕಿಳಿಸಿಲು ನಿರ್ಧರಿಸಿರುವುದರಿಂದ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಜ್ವಲ್ ಉತ್ಸುಕರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ತಯಾರಿಯನ್ನೂ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಿಂದಲೇ ವಿಧಾನಸಭೆ ಪ್ರವೇಶಿಸಿದರೆ ರಾಜ್ಯ ರಾಜಕಾರಣದಲ್ಲಿ ಬಿಗಿಹಿಡಿತ ಸಾಧಿಸಬಹುದು ಎಂಬುದು ಅವರ ಲೆಕ್ಕಾಚಾರ. ಜತೆಗೆ ಪಕ್ಷದ ಕೆಲವು ಮುಖಂಡರೂ ಪ್ರಜ್ವಲ್ ಪರವಾಗಿ ವಾದ ಮಂಡಿಸುತ್ತಿದ್ದಾರೆ.
ಆದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪ್ರಜ್ವಲ್‌ಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಒಪ್ಪುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದೆ. ಕುಟುಂಬದಲ್ಲಿ ಮುಂದೆ ಸಮಸ್ಯೆಗಳು ತಲೆದೋರಬಹುದು ಎಂಬ ಕಾರಣಕ್ಕಾಗಿ ಬೇಲೂರಿನಿಂದ ಬೇಕಾದರೆ ಸ್ಪರ್ಧಿಸಲಿ ಎಂಬ ನಿಲವಿಗೆ ಕುಮಾರಸ್ವಾಮಿ ಬರಬಹುದು. ಹಾಗಾದಲ್ಲಿ ಪ್ರಜ್ವಲ್‌ಗೆ ಬೇಲೂರು ಕ್ಷೇತ್ರ ಒಲಿಯಬಹುದು ಎನ್ನಲಾಗಿದೆ.
