65,911 ಅಂಗನವಾಡಿ ಮೂಲಕ 12 ಲಕ್ಷ ಮಂದಿಗೆ ಸರ್ಕಾರದಿಂದ ಪೌಷ್ಟಿಕ ಬಿಸಿಯೂಟ | ಗರ್ಭಿಣಿಯರು, ಬಾಣಂತಿಯರಿಗೆ ಹೊಸ ಯೋಜನೆ

ಬೆಂಗಳೂರು: ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳಲ್ಲಿ ಪೋಷಕಾಂಶ ಹೆಚ್ಚಿಸುವ ಉದ್ದೇಶ ಹೊಂದಿರುವ ಮಹತ್ವಾಕಾಂಕ್ಷಿ ‘ಮಾತೃಪೂರ್ಣ ಯೋಜನೆ’ ಅ.2ರ ಮಹಾತ್ಮ ಗಾಂಧಿ ಜಯಂತಿಯಂದು ಜಾರಿಯಾಗುತ್ತಿದೆ.

ಹೆರಿಗೆ ಸಂದರ್ಭದಲ್ಲಿ ಶಿಶು ಹಾಗೂ ತಾಯಂದಿರ ಮರಣ ತಡೆಗಟ್ಟಲು ಹಾಗೂ ಗರ್ಭಿಣಿ, ಬಾಣಂತಿಯರಲ್ಲಿ ರಕ್ತಹೀನತೆ, ಅಪೌಷ್ಟಿಕತೆ ನಿವಾರಿಸಲು ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ನೀಡುವ ಉದ್ದೇಶದಿಂದ 202 ಕೋಟಿ ರು. ಅನುದಾನದಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ಮಂಗಳವಾರ ನಗರದಲ್ಲಿ ನಡೆದ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳಲ್ಲಿನ 5.35 ಲಕ್ಷ ಗರ್ಭಿಣಿಯರು, 5.22 ಲಕ್ಷ ಬಾಣಂತಿಯರು, 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿ ಒಟ್ಟು 12 ಲಕ್ಷ ಅರ್ಹ ಫಲಾನುಭವಿಗಳಿಗೆ 65,911 ಅಂಗನವಾಡಿ ಕೇಂದ್ರಗಳ ಮೂಲಕ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ವಿತರಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಅಲ್ಲದೆ, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ನೋಂದಣಿಯಾದ ದಿನದಿಂದ ಹೆರಿಗೆಯಾದ ಆರು ತಿಂಗಳವರೆಗಿನ ಬಾಣಂತಿಯರಿಗೆ ಈ ಸೌಲಭ್ಯ ಲಭ್ಯವಾಗಲಿದೆ. 2016-17ನೇ ಸಾಲಿನಲ್ಲಿ ಮಾನ್ವಿ, ಸಿರಿವಾರ, ಎಚ್.ಡಿ. ಕೋಟೆ, ಮಧುಗಿರಿ ಮತ್ತು ಜಮಖಂಡಿಗಳಲ್ಲಿ ಬಿಸಿಯೂಟ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈ ಯೋಜನೆ ಯಶಸ್ವಿಯಾಗಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಇಲಾಖೆ ನಿರ್ದೇಶಕಿ ದೀಪಾ ಚೋಲನ್ ಮಾತನಾಡಿ, ಮಧ್ಯಾಹ್ನದ ಬಿಸಿ ಊಟಕ್ಕೆ 21 ರು. ವೆಚ್ಚ ಮಾಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರು, ಸಹಾಯಕರಿಗೆ ಕೆಲಸದ ಒತ್ತಡ ತಪ್ಪಿಸಲು ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಒಂದೇ ಊಟ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ 25,000 ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು.

ಯೋಜನೆ ನಿಮಿತ್ತ ಅಂಗನವಾಡಿಗಳಿಗೆ ಅಗತ್ಯವಿರುವ ತೂಕದ ಯಂತ್ರ, ಸಿಲಿಂಡರ್, ಕುಕ್ಕರ್, ಡಬಲ್ ಬರ್ನಲ್ ಎಲ್‌ಪಿಜಿ ಸ್ಟೌವ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಫಲಾನುಭವಿಗಳಿಗೆ ಲಭಿಸಲಿವೆ. ಅಂಗನವಾಡಿ ಕೇಂದ್ರಗಳಿಗೆ ತೆರಳಿ ಊಟ ಪಡೆಯಲಾಗದ ತಿಂಗಳ ಗರ್ಭಿಣಿ ಹಾಗೂ 45 ದಿನಗಳವರೆಗೆ ಬಾಣಂತಿಗೆ ಮನೆಗೆ ಊಟ ತಲುಪಿಸಲಾಗುವುದು. ಆದರೆ, ಮನೆಯ ಸದಸ್ಯರು ಬಂದು ಆಹಾರ ತೆಗೆದು ಕೊಂಡು ಹೋಗಬೇಕು. ಸ್ತ್ರೀ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತೆಯರ ಮೂಲಕ ಪ್ರಚಾರ ನಡೆಸಿ ಅರ್ಹರಿಗೆ ಸೌಲಭ್ಯ ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.