ನವದೆಹಲಿ[ಜೂ.14]: ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್‌ ಸೇವೆ ಒದಗಿಸುವ ಮೂಲಕ ಹೆಚ್ಚಿನ ಆದಾಯಕ್ಕೆ ಯೋಜನೆ ರೂಪಿಸಿರುವುದು ‘ಭಾರತೀಯ ಸಂಸ್ಕೃತಿ’ಗೆ ವಿರುದ್ಧವಾದ ‘ಕಳಂಕಿತ ವಿಚಾರ’ ಎಂದು ಇಂದೋರ್‌ ಸಂಸದ ಶಂಕರ್‌ ಲಾಲ್ವಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಜೂ.10 ರಂದು ಪತ್ರ ಬರೆದಿರುವ ಅವರು, ಮಹಿಳೆಯರ ಮುಂದೆಯೇ ಇಂಥ ಸೇವೆ ಒದಗಿಸುವುದು ಸಮರ್ಪಕವಾದುದಲ್ಲ. ಅಲ್ಲದೇ ಇದಕ್ಕೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿವೆ ಎಂದು ತಮ್ಮ ಪತ್ರದಲ್ಲಿ ದೂರಿದ್ದಾರೆ. ಸ್ಥಳೀಯ ರೈಲುಗಳಲ್ಲಿ ಬಹುತೇಕ ಬಡ ಜನರೇ ಸಂಚರಿಸುತ್ತಿದ್ದು, ಅವರು ಇದರ ಬಗ್ಗೆ ಯೋಚನೆ ಮಾಡಲೂ ಸಹ ಸಾಧ್ಯವಿಲ್ಲ. ಇನ್ನು ಪ್ರವಾಸಿ ತಾಣಗಳ ಸಂಪರ್ಕದ ರೈಲುಗಳಲ್ಲಿ ಇದನ್ನು ಮಾಡಬಹುದಾದರೂ ಇದು ಭಾರತೀಯ ಸಂಸ್ಕೃತಿ, ಸಿದ್ಧಾಂತಗಳ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ರೈಲು ಪ್ರಯಾಣಿಕರಿಗೊಂದು ಗುಡ್ ನ್ಯೂಸ್: ಇನ್ಮುಂದೆ ಸಿಗುತ್ತೆ ಹೊಸ ಸೇವೆ!

ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ ಮಸಾಜ್‌ ಸೇವೆ ಒದಗಿಸುವ ಹೊಸ ಯೋಜನೆ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಆರಂಭಿಸಲು ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ ಇಂದೋರ್‌ನಿಂದ ಹೊರಡುವ 39 ರೈಲುಗಳಲ್ಲಿ ಇನ್ನು 15-20 ದಿನಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ ಎನ್ನಲಾಗಿತ್ತು.