ನವದೆಹಲಿ[ಜೂ.09]: ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ ಮಸಾಜ್‌ ಸೇವೆ ಒದಗಿಸುವ ಹೊಸ ಯೋಜನೆಯೊಂದನ್ನು ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಆರಂಭಿಸುತ್ತಿದೆ. ಆರಂಭಿಕ ಹಂತದಲ್ಲಿ ಇಂದೋರ್‌ನಿಂದ ಹೊರಡುವ 39 ರೈಲುಗಳಲ್ಲಿ ಇನ್ನು 15-20 ದಿನಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.

ಈ ಯೋಜನೆ ಅನ್ವಯ, ಒಟ್ಟು ಮೂರು ಮಾದರಿಯಲ್ಲಿ ತಲೆ ಮತ್ತು ಕಾಲಿಗೆ ಮಸಾಜ್‌ ಸೇವೆಯನ್ನು ಒದಗಿಸಲಾಗುತ್ತದೆ. ಅವುಗಳಿಗೆ ಗೋಲ್ಡ್‌, ಡೈಮಂಡ್‌ ಮತ್ತು ಪ್ಲಾಟಿನಂ ಎಂದು ಹೆಸರಿಡಲಾಗಿದೆ. ಈ ಎಲ್ಲಾ ಸೇವೆಗಳು 15-20 ನಿಮಿಷ ಅವಧಿಯದ್ದಾಗಿರಲಿವೆ. ಗೋಲ್ಡ್‌ ಮಾದರಿಯಲ್ಲಿ ಯಾವುದಾದರೂ ಜಿಡ್ಡು ರಹಿತ ಎಣ್ಣೆ ಅಥವಾ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡಲಾಗುವುದು. ಇದಕ್ಕೆ 100 ರು. ದರ ಇರಲಿದೆ. ಡೈಮಂಡ್‌ ಮಾದರಿಯಲ್ಲಿ ಯಾವುದೇ ಸಸ್ಯಜನ್ಯ ಎಣ್ಣೆ ಅಥವಾ ಕ್ರೀಮ್‌ ಬಳಸಲಾಗುವುದು ಮತ್ತು ಜಿಡ್ಡನ್ನು ಒರೆಸಲಾಗುವುದು. ಇದಕ್ಕೆ 200 ರು. ಶುಲ್ಕವಿರಲಿದೆ. ಪ್ಲಾಟಿನಂ ಮಾದರಿಯಲ್ಲಿ ಸುಗಂಧಿತ ವಿಶೇಷ ಎಣ್ಣೆಯಲ್ಲಿ ಮಸಾಜ್‌ಗೆ 300 ರು. ಶುಲ್ಕ ಇರಲಿದೆ.

ಮಸಾಜ್‌ ಮಾಡಲು ಪ್ರತಿ ರೈಲಿನಲ್ಲಿ 3-5 ಜನ ಇರಲಿದ್ದಾರೆ. ಅವರಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುವುದು. ಮುಂಜಾನೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸೇವೆ ಇರಲಿದೆ. ಈ ಸೇವೆಯಿಂದ ಮೊದಲ ವರ್ಷ 20 ಲಕ್ಷ ರು. ಆದಾಯ ಸಂಗ್ರಹದ ಗುರಿ ಇದೆ.

ಆದಾಯ ಸಂಗ್ರಹಕ್ಕೆ ಹೊಸ ಮಾರ್ಗ ಹುಡುಕಲು ನೀಡಿದ್ದ ಸೂಚನೆ ಅನ್ವಯ ಪಶ್ಚಿಮ ರೈಲ್ವೆ ವ್ಯಾಪ್ತಿಗೆ ಬರುವ ರತ್ಲಾಂ ವಿಭಾಗವು, ಈ ಹೊಸ ಸೇವೆಯ ಸಲಹೆ ನೀಡಿ, ಅದನ್ನು ಜಾರಿಗೊಳಿಸುತ್ತಿದೆ.