ರಾಜ್ಯ ಸರಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದೆ. ಆದರೆ ಇಲ್ಲಿ ಕೇಸರಿ ಧ್ವಜ ಹಾರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ 100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ಕುಟುಂಬಗಳು ನೀರು, ಕರೆಂಟ್​, ಊಟವಿಲ್ಲದೇ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದು ಎಲ್ಲಿ ಅಂತೀರಾ ಹಾಗಿದ್ದರೆ ಈ ವರದಿ ನೋಡಿ.

ವಿಜಯಪುರ(ಸೆ.30): ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮವಿದ್ರೆ, ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಮಟ್ಯಾಳ ಗ್ರಾಮದ 100 ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬಗಳಿಗೆ ಸವರ್ಣಿಯರು ಬಹಿಷ್ಕಾರ ಹಾಕಿದ್ದಾರೆ.

ಮಟ್ಯಾಳ ಗ್ರಾಮದಲ್ಲಿನ ವೃತ್ತಕ್ಕೆ ಬಸವೇಶ್ವರ, ಅಂಬೇಡ್ಕರ್ ಹಾಗೂ ಬುದ್ಧ ವೃತ್ತವೆಂದು ಘೋಷಿಸಲಾಗಿತ್ತು. ಆದರೆ ಆ ವೃತ್ತದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. .ಇದನ್ನ ಪ್ರಶ್ನಿಸಿದ 100 ದಲಿತ ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ ನೀಡಿದ್ದಾರೆ. ದಿನಸಿ ಅಂಗಡಿಗೆ ಹೋಗುವಂತಿಲ್ಲ. ದೇವಸ್ಥಾನಕ್ಕೂ ಪ್ರವೇಶವಿಲ್ಲ. ಗಿರಣಿ, ಪಡಿತರ ಅಂಗಡಿಗೂ ನಿರ್ಬಂಧ ಹೇರಿದ್ದಾರೆ. ದಲಿತರ ಕೇರಿಗೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಸಿದ್ದಾರಂತೆ. ಹೀಗಾಗೆ ನೊಂದ ದಲಿತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗೆ ಡಿಸಿ ಕಚೇರಿ ಎದುರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ದಲಿತರ ಮೇಲಿನ ದೌರ್ಜನ್ಯಕ್ಕೆ ಇತಿಶ್ರೀ ಹಾಡಬೇಕಿದೆ.