ಕೊಪ್ಪಳದ ಹಾಲವರ್ತಿ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ರಾತ್ರಿಯಿಡಿ ಜಾಗರಣೆ  ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಗಾಳಿ ಸುದ್ದಿ. ಹೌದು ಮಹಿಳೆಯರಲ್ಲಿನ ಕೊರಳಲ್ಲಿನ ಹವಳವನ್ನು ತೆಗೆದು ಹಾಕದಿದ್ದರೆ ಪತಿಗೆ ಸಾವು ಸಂಭವಿಸುತ್ತದೆ ಎನ್ನುವ ಗಾಳಿ ಸುದ್ದಿ ರಾತ್ರಿಯಿಡಿ ಮಹಿಳೆಯರನ್ನು ಜಾಗರಣೆ ಮಾಡುವಂತೆ ಮಾಡಿದೆ.

ಕೊಪ್ಪಳ(ಜು.05): ಕೊಪ್ಪಳದ ಹಾಲವರ್ತಿ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಗಾಳಿ ಸುದ್ದಿ. ಹೌದು ಮಹಿಳೆಯರಲ್ಲಿನ ಕೊರಳಲ್ಲಿನ ಹವಳವನ್ನು ತೆಗೆದು ಹಾಕದಿದ್ದರೆ ಪತಿಗೆ ಸಾವು ಸಂಭವಿಸುತ್ತದೆ ಎನ್ನುವ ಗಾಳಿ ಸುದ್ದಿ ರಾತ್ರಿಯಿಡಿ ಮಹಿಳೆಯರನ್ನು ಜಾಗರಣೆ ಮಾಡುವಂತೆ ಮಾಡಿದೆ.

ರಾತ್ರಿಯೆಲ್ಲ ಎಲ್ಲರೂ ಊಟ ಮಾಡಿ ಹಾಯಾಗಿ ಮಲಗಿದ್ದಾರೆ. ಆದ್ರೆ ಬೇರೆ ಊರುಗಳಲ್ಲಿನ ಸಂಬಂಧಿಕರು ಫೋನ್ ಮಾಡಿ ಮೊದಲು ನಿಮ್ಮ ಕೊರಳಲ್ಲಿನ ಮಾಂಗಲ್ಯ ಸರದ ಹವಳನ್ನು ಒಡೆದು ಹಾಕಿ, ಇಲ್ಲವೆಂದರೆ ನಿಮ್ಮ ಗಂಡ ಸಾಯುತ್ತಾನೆ ಎಂದು ಹೇಳಿದ್ದಾರೆ. ಇದರಿಂದ ಭಯಗೊಂಡ ಮಹಿಳೆಯರು ತಮ್ಮ ಕೊರಳಲಿನ ಮಾಂಗಲ್ಯ ಸರದ ಹವಳನ್ನು ಒಡೆದು ಹಾಕಿದ್ದಾರೆ. ಇನ್ನು ಕೆಲವು ಮಹಿಳೆಯರು ಒಂದು ಹೆಜ್ಜೆ ಮುಂದೆ ಹೋಗಿ ತಾಳಿಯನ್ನು ತೆಗೆದು ಹಾಕಿ, ಅರಿಷಿನ ಕೊಂಬನ್ನು ಕಟ್ಟಿಕೊಂಡಿದ್ದಾರೆ.

ಮೊದಲು ಮಹಿಳೆಯರು ತಮ್ಮ ಪತಿಯಂದಿರಿಗೆ ಹೇಳಲಾರದೆ ಮಾಂಗಲ್ಯದಲ್ಲಿನ ಹವಳಗಳನ್ನು ಒಡೆದು ಹಾಕಿದ್ದಾರೆ. ಬಳಿಕ ಅವರೆಲ್ಲ ಯಾಕೆ ಒಡೆದಿದ್ದೀರಿ ಎಂದು ಕೇಳಿದಾಗ ಹೇಳಿದ್ದಾರೆ. 'ಹವಳ ಮಹಿಳೆಯೊಂದಿಗೆ ಮಾತನಾಡಿದೆ, ಆಕೆ ಹವಳ ತೆಗೆಯದ ಕಾರಣಕ್ಕೆ ಆಕೆಯ ಪತಿ ಸಾವನ್ನಪ್ಪಿದ್ದಾನೆ' ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದನ್ನೇ ನಂಬಿದ ಮಹಿಳೆಯರು ಎಲ್ಲರೂ ಹವಳಗಳನ್ನು ತೆಗೆದಿದ್ದಾರೆ. ಇನ್ನು ಈ ಸುದ್ದಿ ಬಳ್ಳಾರಿ ಜಿಲ್ಲೆಯಿಂದ ಹಬ್ಬಿದೆ ಎನ್ನಲಾಗಿದೆ. ಈ ಗಾಳಿ ಸುದ್ದಿಯನ್ನು ಕೆಲವು ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸುತ್ತಾರೆ. ಇದೆಲ್ಲ ಸುಳ್ಳು ಸುದ್ದಿಯಾಗಿದ್ದು, ಇದಕ್ಕೆಲ್ಲ ಕಾರೂ ಕಿವಿಕೊಡಬಾರದು ಅಂತಾರೆ ಪ್ರಜ್ಞಾವಂತರು.

ಈ ಗಾಳಿ ಸುದ್ದಿ ಇಡೀ ಜಿಲ್ಲೆಯಾದ್ಯಂತ ಹರಡಿದ್ದು, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಈ ಮುಂಚೆ ಇಂತಹುದ್ದೇ ಬೇರೆ ಬೇರೆ ಗಾಳಿ ಸುದ್ದಿಗಳು ಹಬ್ಬಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದ್ದವು. ಇದೀಗ ಅಂತಹ ಗಾಳಿ ಸುದ್ದಿಗಳ ಸಾಲಿಗೆ ಹವಳ ಒಡೆದು ಹಾಕುವುದು ಸಹ ಸೇರಿಕೊಂಡಿದೆ.

ಒಟ್ಟಿನಲ್ಲಿ ಮೌಢ್ಯದ ಪರಮಾವಧಿಯಿಂದಾಗಿ ಮಹಿಳೆಯರು ತಮ್ಮ ಕೊರಳಿನ ಮಾಂಗಲ್ಯ ಸರದ ಹವಳಗಳನ್ನು ಒಡೆದು ಹಾಕಿದ್ದಾರೆ. ಇನ್ನಾದರೂ ಮಹಿಳೆಯರು ಇಂತಹ ಗಾಳಿ ಸುದ್ದಿಗಳಿಂದ ದೂರ ಇರುವ ಮೂಲಕ ನೆಮ್ಮದಿಯಿಂದ ಇರಬೇಕಿದೆ.