ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮುಂಬೈನ ಮಹಿಳಾ ಕಲಾವಿದೆಯೊಬ್ಬರನ್ನು ಲೈಂಗಿಕ ಶೋಷಣೆ. ಆರೋಪಿಗಳು ಸಂತ್ರಸ್ತೆಗೆ ಡ್ರಗ್ಸ್ ನೀಡಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಇಂಟರ್ನೆಟ್‌ಗೆ ಹರಿಬಿಟ್ಟಿದ್ದಾರೆ. ಕೊಲೆ ಬೆದರಿಕೆ ನಡುವೆಯೂ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈ (ಜ.25): ಮಾಯಾನಗರಿ ಮುಂಬೈನಲ್ಲಿ ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮಹಿಳಾ ಕಲಾವಿದೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಇಂಟರ್ನೆಟ್‌ಗೆ ಹರಿಬಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಅವಕಾಶದ ಆಮಿಷ: ಸೋಷಿಯಲ್ ಮೀಡಿಯಾ ಮೂಲಕ ಗಾಳ
ಸಂತ್ರಸ್ತೆ ಕಳೆದ ನಾಲ್ಕು ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಮುಂಬೈನಲ್ಲಿ ವಾಸವಿದ್ದು, ಸೋಷಿಯಲ್ ಮೀಡಿಯಾ ರೀಲ್ಸ್ ಮೂಲಕ ಗುರುತಿಸಿಕೊಂಡಿದ್ದರು. ಕೆಲಸದ ನಿರೀಕ್ಷೆಯಲ್ಲಿದ್ದ ಇವರಿಗೆ ಜುಲೈ 2025ರಲ್ಲಿ ಸಲ್ಮಾನ್ ಎಂಬಾತ ಕರೆ ಮಾಡಿ ಪಾಡ್‌ಕ್ಯಾಸ್ಟ್‌ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದ. ನಂತರ ಸೋನಿಯಾ ಗುಪ್ತಾ ಎಂಬ ಮಹಿಳೆಯ ಪರಿಚಯ ಮಾಡಿಕೊಟ್ಟು, ಆಕೆಯ ಮನೆಗೆ ಸಂತ್ರಸ್ತೆಯನ್ನು ಕರೆಯಿಸಿಕೊಳ್ಳಲಾಗಿತ್ತು.
ಡ್ರಗ್ಸ್ ನೀಡಿ ಕಾಮದಾಟ: ಗೋವಾ ಪ್ರವಾಸದ ಕರಾಳ ಮುಖ
ಸೋನಿಯಾ ಗುಪ್ತಾ ತನ್ನನ್ನು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಎಂದು ಪರಿಚಯಿಸಿಕೊಂಡು, ಶೂಟಿಂಗ್ ನೆಪದಲ್ಲಿ ಸಂತ್ರಸ್ತೆಗೆ ಅಮಲು ಪದಾರ್ಥಗಳನ್ನು ನೀಡುತ್ತಿದ್ದಳು ಎನ್ನಲಾಗಿದೆ. ಆಗಸ್ಟ್ 2025 ರಲ್ಲಿ ಕೇರಳ ಮತ್ತು ಗೋವಾ ಪ್ರವಾಸಕ್ಕೆಂದು ಕರೆದೊಯ್ದ ತಂಡ, ಅಲ್ಲಿನ ಹೋಟೆಲ್‌ವೊಂದರಲ್ಲಿ ಮೊಬೈಲ್‌ಗಳನ್ನು ಕಸಿದುಕೊಂಡು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ. ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತನಗೆ ಮಾದಕ ದ್ರವ್ಯ ನೀಡಿ ಶೋಷಣೆ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಅಶ್ಲೀಲ ವೆಬ್‌ಸೈಟ್‌ನಲ್ಲಿ ವಿಡಿಯೋ ಪ್ರತ್ಯಕ್ಷ: ಕುಟುಂಬಸ್ಥರಿಗೆ ಶಾಕ್
ಜೂಜು ಮತ್ತು ಮೋಜಿನ ವಿಡಿಯೋಗಳ ಚಿತ್ರೀಕರಣ ಎಂದು ನಂಬಿಸಿ, ಅಸಲಿಗೆ ಆಕೆಯ ಆಕ್ಷೇಪಾರ್ಹ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಜನವರಿ 2026 ರಲ್ಲಿ ಸಂತ್ರಸ್ತೆಯ ಸಂಬಂಧಿಕರೊಬ್ಬರು ಅಶ್ಲೀಲ ವೆಬ್‌ಸೈಟ್‌ನಲ್ಲಿ ಇವರ ವಿಡಿಯೋ ನೋಡಿ ವಿಷಯ ತಿಳಿಸಿದಾಗ ಅಸಲಿ ಸತ್ಯ ಬಯಲಾಗಿದೆ. ತನ್ನ ಅನುಮತಿಯಿಲ್ಲದೆ, ಪ್ರಜ್ಞೆ ತಪ್ಪಿಸಿ ಚಿತ್ರೀಕರಿಸಿದ ವಿಡಿಯೋಗಳನ್ನು ನೋಡಿ ಸಂತ್ರಸ್ತೆ ದಿಗ್ಭ್ರಮೆಗೊಂಡಿದ್ದಾರೆ.
ಕೊಲೆ ಬೆದರಿಕೆ ನಡುವೆಯೂ ಪೊಲೀಸ್ ಮೆಟ್ಟಿಲೇರಿದ ಸಂತ್ರಸ್ತೆ
ವಿಡಿಯೋ ಡಿಲೀಟ್ ಮಾಡುವಂತೆ ಕೇಳಿದಾಗ ಆರೋಪಿ ಸೋನಿಯಾ ಗುಪ್ತಾ ಸಂತ್ರಸ್ತೆಗೆ ಕೊಲೆ ಬೆದರಿಕೆ ಹಾಕಿದ್ದಾಳೆ. ಆದರೂ ಎದೆಗುಂದದ ಸಂತ್ರಸ್ತೆ ಸಮ್ತಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಲೈಂಗಿಕ ದೌರ್ಜನ್ಯ, ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈ ಬೃಹತ್ ದಂಧೆಯ ಹಿಂದಿರುವ ಕಿಡಿಗೇಡಿಗಳಿಗಾಗಿ ಬಲೆ ಬೀಸಿದ್ದಾರೆ.


