Asianet Suvarna News Asianet Suvarna News

ರಾಜೀವ್ ಆರೋಗ್ಯ ವಿ.ವಿ.ಯಿಂದ 1 ಲಕ್ಷ ಹೆಚ್ಚುವರಿ ಅಂಕಪಟ್ಟಿ ಮುದ್ರಣ: ಹೆಚ್ಚುವರಿ ಅಂಕಪಟ್ಟಿಗಳ ದುರುಪಯೋಗ?

ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಗತ್ಯಕ್ಕೂ ಮೀರಿ ಬ್ಲಾಂಕ್​ ಅಂಕಪಟ್ಟಿಗಳನ್ನು ಮುದ್ರಿಸಿರುವುದು ಸೇರಿದಂತೆ ಹಲವು ಲೋಪಗಳು ಬೆಳಕಿಗೆ ಬಂದಿವೆ. ರಾಜ್ಯ ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿದೇರ್ಶಕರು ಸಲ್ಲಿಸಿರುವ 2013-14ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ವಿಶ್ವವಿದ್ಯಾಲಯದ ಹಲವು ಲೋಪಗಳು ಮತ್ತು ವಿಶ್ವವಿದ್ಯಾಲಯಕ್ಕೆ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತಾದ ಹಲವು ವಿವರಗಳಿವೆ.

Marks Card Scam From Rajiv Gandhi University

ಬೆಂಗಳೂರು(ಮಾ.02): ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಗತ್ಯಕ್ಕೂ ಮೀರಿ ಬ್ಲಾಂಕ್​ ಅಂಕಪಟ್ಟಿಗಳನ್ನು ಮುದ್ರಿಸಿರುವುದು ಸೇರಿದಂತೆ ಹಲವು ಲೋಪಗಳು ಬೆಳಕಿಗೆ ಬಂದಿವೆ. ರಾಜ್ಯ ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿದೇರ್ಶಕರು ಸಲ್ಲಿಸಿರುವ 2013-14ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ವಿಶ್ವವಿದ್ಯಾಲಯದ ಹಲವು ಲೋಪಗಳು ಮತ್ತು ವಿಶ್ವವಿದ್ಯಾಲಯಕ್ಕೆ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತಾದ ಹಲವು ವಿವರಗಳಿವೆ.

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಂಕಪಟ್ಟಿ ಶಾಖೆಯ ಬೇಡಿಕೆ ಪತ್ರ ಸಂಖ್ಯೆ ಇರದಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ. ಇದೇ ಶಾಖೆ ಎಷ್ಟು ಸಂಖ್ಯೆಯ ಅಂಕಪಟ್ಟಿಗಳಿಗೆ ಯಾವ ದಿನಾಂಕದಂದು ಬೇಡಿಕೆ ಸಲ್ಲಿಸಿದ್ದಾರೆ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಪಟ್ಟಿದ್ದಾರೆ.

1 ಲಕ್ಷ ಸಂಖ್ಯೆಯಲ್ಲಿ ಅಂಕಪಟ್ಟಿಗಳಿಗೆ ಬೇಡಿಕೆ ಇದ್ದರೂ 2 ಲಕ್ಷ ಸಂಖ್ಯೆಯಲ್ಲಿ ಅಂಕಪಟ್ಟಿಗಳನ್ನು ಮುದ್ರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ ಮುದ್ರಿಸಿರುವ 1 ಲಕ್ಷ ಸಂಖ್ಯೆಯ ಅಂಕಪಟ್ಟಿಗಳು ದುರುಪಯೋಗ ಆಗಿರುವ ಸಾಧ್ಯತೆಗಳೂ ಇವೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಹೇಳಿದ್ದಾರೆ. ಹೆಚ್ಚುವರಿಯಾಗಿ 1 ಲಕ್ಷ ಸಂಖ್ಯೆಯಲ್ಲಿ ಅಂಕಪಟ್ಟಿ ಸರಬರಾಜು ಮಾಡಲು ಟೆಂಡರ್​ ಕರೆದಿದ್ದರ ಬಗ್ಗೆ ವಿಶ್ವವಿದ್ಯಾಲಯ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಅಲ್ಲದೆ, 2 ಬಾರಿ ಟೆಂಡರ್ ಪ್ರಕಟಣೆ ಮಾಡಿದ ದಿನಪತ್ರಿಕೆಗಳ ಪ್ರತಿ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ವೆಚ್ಚದ ಬಿಲ್​ಗಳ ಮಾಹಿತಿ ಇಲ್ಲದಿರುವುದು ಮತ್ತು ಟೆಂಡರ್​ ಪ್ರಕಟಣೆಯನ್ನು ಟೆಂಡರ್​ ಬುಲೆಟಿನ್​ನಲ್ಲಿ ಪ್ರಕಟಿಸಿದ ಮಾಹಿತಿ ಕೂಡ ಇರದಿರುವುದು ಲೆಕ್ಕ ಪರಿಶೋಧಕರ ವರದಿಯಿಂದ ತಿಳಿದು ಬಂದಿದೆ.

2013ರ ನವೆಂಬರ್​ 26ರ ನಂತರ ಯಾವುದೇ ದಿನಾಂಕದಲ್ಲಿಯು ಉಳಿಕೆ ಅಂಕಪಟ್ಟಿಯನ್ನು ಬಳಸಿಲ್ಲ. ಅಗತ್ಯವಿದೆ ಎಂದು ಮುದ್ರಿಸಿ ದಾಸ್ತಾನಿಗೆ ತೆಗೆದುಕೊಂಡಿರುವ ಅಂಕಪಟ್ಟಿಯನ್ನು ಬಳಸದಿರುವ ಕಾರಣ 3,74,000 ರೂ.ಅನಗತ್ಯ ವೆಚ್ಚವಾಗಿದೆ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ ವಿಶ್ವವಿದ್ಯಾಲಯ ಕಂಪ್ಯೂಟರ್​ ಶಾಖೆಯಲ್ಲಿ ಸ್ವೀಕೃತವಾಗಿರುವ 10,000 ಅಂಕಪಟ್ಟಿಗಳ ಬಳಕೆ, ವಿತರಣೆ ಮತ್ತು ಉಳಿಕೆ ವಿವರ ಪರಿಶೀಲಿಸುವ ಬಗ್ಗೆ ಲೆಕ್ಕ ಪರಿಶೋಧಕರಿಗೆ ದಾಸ್ತಾನು ವಹಿ ಹಾಜರುಪಡಿಸದಿರುವುದು ಕೂಡ ಲೆಕ್ಕ ಪರಿಶೋಧಕರ ವರದಿಯಿಂದ ಗೊತ್ತಾಗಿದೆ.

ಡಿ.ಎ. ಕ್ರಮ ಸಂಖ್ಯೆಯ ಅಂಕಪಟ್ಟಿಗಳನ್ನು ಬಳಸಲಾಗುತ್ತಿದೆಯೆಂದು ಮೌಖಿಕವಾಗಿ ವಿಶ್ವವಿದ್ಯಾಲಯ ಅಧಿಕಾರಿಗಳು ತಿಳಿಸಿದ್ದರೂ, ಸಿ.ಎ,.ಸೀರೀಸ್​ನ ಅಂಕಪಟ್ಟಿಗಳನ್ನು ಬಳಸದೇ ಅವುಗಳನ್ನು ದಾಸ್ತಾನಿನಲ್ಲಿ ಹಾಗೆಯೇ ಉಳಿಸಿಕೊಂಡು ಹೊಸದಾಗಿ ಅಂಕಪಟ್ಟಿಗಳನ್ನು ಮುದ್ರಿಸಿ ಬಳಸುತ್ತಿರುವುದು ನಿಯಮಬಾಹಿರವಾಗಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಹೇಳಿದ್ದಾರೆ.

ಇಂಡೆಂಟ್​ ಇಲ್ಲದೆಯೇ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್​ ಶೀಟ್​​ಗಳನ್ನು ಮುದ್ರಿಸಿರುವ ವಿ.ವಿ., ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರುವ ಬಗ್ಗೆ ಯಾವುದೇ ದಾಖಲೆಯನ್ನಿಡದಿರುವುದು ವರದಿಯಿಂದ ಗೊತ್ತಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್​ ಶೀಟ್​ಗಳನ್ನು ಮಧುಕರ್​ ಪ್ರಿಂಟರ್ಸ್​ನಿಂದ ಸ್ವೀಕರಿಸಿ ನಂತರ ಅದನ್ನು ಪರೀಕ್ಷಾ ಕೇಂದ್ರಕ್ಕೆ ಸರಬರಾಜು ಮಾಡುವ ಬದಲಾಗಿ ಮಧುಕರ್​ ಪ್ರಿಂಟರ್ಸ್​ಗೆ ಜವಾಬ್ದಾರಿ ವಹಿಸುವ ಔಚಿತ್ಯವೇನಿತ್ತು? ಎಂದು ಪ್ರಶ್ನಿಸಿರುವ ಲೆಕ್ಕ ಪರಿಶೋಧಕರು, ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ವಿ.ವಿ.ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇ-ಜರ್ನಲ್​ ಲೆಕ್ಕ ವಿವರಗಳಿಲ್ಲ

ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಇ-ಜರ್ನಲ್​ಗೆ ಸಂಬಂಧಿಸಿದಂತೆ 2013-14ನೇ ಸಾಲಿನಲ್ಲಿ 9,12,00,028 ರು.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿಲ್ಲ. ಹೀಗಾಗಿ, 9,12,00,028 ರೂ.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿದ್ದಾರೆ. ಇನ್ನು, ಸೆನೆಟ್​​ ಮತ್ತು ಸಿಂಡಿಕೇಟ್​ ಸದಸ್ಯರ ಅನುಮೋದನೇ ಇಲ್ಲದೆಯೇ ವಿ.ವಿ. ನಿಧಿಯಲ್ಲಿ ಹೆಚ್ಚುವರಿಯಾಗಿ ಉಳಿದಿರುವ 6,47,92,00,000 ರೂ.ಗಳನ್ನು ಖಾಸಗಿ ಬ್ಯಾಂಕ್​ಗಳಲ್ಲಿ ಹೂಡಿಕೆ ಮಾಡಿರುವ ಅಧಿಕಾರಿಗಳು, ಹೂಡಿಕೆ ಪ್ರಮಾಣ ಪತ್ರಗಳನ್ನು ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ.

1996-97ನೇ ಸಾಲಿನಿಂದ 2013-14ನೇ ಸಾಲಿನಲ್ಲಿ 240,75,31,372 ರೂ.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿದ್ದಾರೆ. 16,99,83,922 ರೂ.ಗಳನ್ನು ವಸೂಲಿ ಮಾಡಬೇಕಿದ್ದರೂ ವಿ.ವಿ. ಇದರ ಬಗ್ಗೆ ಕ್ರಮ ವಹಿಸದಿರುವುದು ವರದಿಯಿಂದ ತಿಳಿದು ಬಂದಿದೆ.

ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್​

 

Follow Us:
Download App:
  • android
  • ios