ಬೆಂಗಳೂರು ವಧು- ವರರಿಗೆ ಜೈಪುರದಲ್ಲಿ ವಿಶೇಷ ಮದುವೆ | ಟೆಕ್ಕಿಗಳ ಹೊಸ ಮದುವೆ ಟೆಕ್ನಿಕ್‌
ಜೋಧ್'ಪುರ: ಆತ ಫೆ.5ರಂದು ಜೈಪುರದಲ್ಲಿ ನಡೆಯಲಿರುವ ಹಾಫ್ ಮ್ಯಾರಥಾನ್ನಲ್ಲಿ ಓಡುತ್ತಾನೆ. ಅದರಲ್ಲಿ ಅವನು ಗೆಲ್ಲುತ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ಫಿನಿಶಿಂಗ್ ಲೈನ್'ನಲ್ಲಿ ಅವನ ಬದುಕಿನ ಗೆಲವು ಅವನಿಗೋಸ್ಕರ ಕಾಯುತ್ತಿರುವುದಂತೂ ಖಚಿತ.
ಮದುವೆ ದಿನ ಹತ್ತಿರ ಬಂದಾಗ ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು, ಹಲವು ಕಸರತ್ತು ಮಾಡಿ ರಜೆ ಗಿಟ್ಟಿಸಿಕೊಳ್ಳುವವರನ್ನು ನೋಡಿರುತ್ತೀರಿ. ಆದರೆ, ಜೈಪುರದ ಅನಂತ್ ತ್ರಿವೇದಿ(31) ಮದುವೆಗಾಗಿ ಮ್ಯಾರಥಾನ್ ಬಿಡಲು ಸಿದ್ಧರಿಲ್ಲ. ಅದಕ್ಕಾಗಿ ಅವರು, ಮ್ಯಾರಥಾನ್ ಮುಗಿಸಿದ ಮರುಕ್ಷಣವೇ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಅವರ ಭಾವಿ ಪತ್ನಿ ಕವಿತಾ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಅದರಂತೆ, ಫೆ.5ರಂದು ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲೇ ಇವರ ವಿವಾಹ ನೆರವೇರಲಿದೆ. ಅತ್ತ ಮ್ಯಾರಥಾನ್ನ ಗಡಿ ತಲುಪುತ್ತಿರುವಂತೆಯೇ, ತ್ರಿವೇದಿಗಾಗಿ ಹೂಹಾರ ಹಿಡಿದುಕೊಂಡು ಕವಿತಾ ಕಾಯುತ್ತಿರುತ್ತಾಳೆ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಎಂಜಿನಿಯರ್ ತ್ರಿವೇದಿ ಹಾಗೂ ಸಾಫ್ಟ್'ವೇರ್ ಉದ್ಯೋಗಿ ಕವಿತಾ ಇಬ್ಬರೂ ಮ್ಯಾರಥಾನ್ ಪ್ರೇಮಿಗಳು. ಆದರೆ, ಗಾಯದ ಸಮಸ್ಯೆಯಿಂದಾಗಿ ಆಕೆ ಓಡುತ್ತಿಲ್ಲ. ಹೂಹಾರ ಬದಲಿಸಿಕೊಂಡ ಬಳಿಕ ಹಿಂದೂ ಸಂಪ್ರದಾಯದಂತೆ ಅಂದೇ ಕೋಟಾದಲ್ಲಿ ಅವರ ಮದುವೆ ನಡೆಯಲಿದೆ.
(epaper.kannadaprabha.in)
