Asianet Suvarna News Asianet Suvarna News

ಬಹಿರಂಗ ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕರು ಯಾರು?

ಸಚಿವ ಸ್ಥಾನ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆ ಬಗೆಹರಿಸುವ ತಮ್ಮ ಬೇಡಿಕೆಗೆ ಪಕ್ಷವು ಪೂರಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ನಮ್ಮ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು  ಕಾಂಗ್ರೆಸ್ ಶಾಸಕರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. 

Many Congress MLAs Demands portfolio
Author
Bengaluru, First Published Sep 18, 2018, 7:52 AM IST

ಬೆಂಗಳೂರು: ಕಾಂಗ್ರೆಸ್‌ನ ಅತೃಪ್ತ ಶಾಸಕರು ಒಬ್ಬೊಬ್ಬರಾಗಿ ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದ್ದು, ಸಚಿವ ಸ್ಥಾನ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆ ಬಗೆಹರಿಸುವ ತಮ್ಮ ಬೇಡಿಕೆಗೆ ಪಕ್ಷವು ಪೂರಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ನಮ್ಮ ಅಂತಿಮ  ನಿರ್ಧಾರ ಕೈಗೊಳ್ಳ ಬೇಕಾಗುತ್ತದೆ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.  

ಸೋಮವಾರ ಬೆಳಗ್ಗೆಯಿಂದಲೇ ಅತೃಪ್ತ ಶಾಸಕರಾದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾನಾಯ್ಕ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಬೇಡಿಕೆ ಹಾಗೂ ಸಮ್ಮಿಶ್ರ ಸರ್ಕಾರದಿಂದ ಆಗುತ್ತಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಮೇಲೆ ಒತ್ತಡ ಹೇರುವ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಬಳಿಕ ಮೂರೂ ಜನ ಬಹಿರಂಗ ಹೇಳಿಕೆ ನೀಡುವ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿದರು. 

ಇದೇ ವೇಳೆ ಸರ್ಕಾರಕ್ಕೆ ಬೆಂಬಲ  ನೀಡಿರುವ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಹಾಗೂ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ತಾವು ಕೂಡ ಸಚಿವ ಸ್ಥಾನ ಆಕಾಂಕ್ಷಿಗಳು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.  ನಾಳೆ ಅಂತಿಮ ನಿರ್ಧಾರ- ಎಂಟಿಬಿ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ನನ್ನನ್ನು ಬಿಜೆಪಿ ಹಿರಿಯ ನಾಯಕರು ಸಂಪರ್ಕ ಮಾಡಿಲ್ಲ. ಕೆಲ ಬಿಜೆಪಿಯವರು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರ ಸೇರಿದಂತೆ ಕೆಲ ವಿಚಾರದಲ್ಲಿ ಮೈತ್ರಿ ಸರ್ಕಾರದ ಬಗ್ಗೆ ನನಗೆ ಅಸಮಧಾನವಿದೆ. ನನ್ನ ಆಪ್ತರೊಂದಿಗೆ ಚರ್ಚಿಸಿ ನಾಳೆ ಎಲ್ಲವನ್ನೂ ಸ್ಪಷ್ಟಪಡಿಸುತ್ತೇನೆ. ನಾಳೆ ಎಲ್ಲವನ್ನೂ ಬಹಿರಂಗಪಡಿಸಿ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು. 

ಇದಕ್ಕೂ ಮೊದಲು ರಮೇಶ್‌ಜಾರಕಿಹೊಳಿ ಮೂಲಕ ತಮಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ತಮಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮಂಗಳವಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕಾಂಗ್ರೆಸ್‌ಗೆ ಎಚ್ಚರಿಸಿದರು ಎಂದು ತಿಳಿದುಬಂದಿದೆ. 

ಸಚಿವ ಸಂಪುಟ ರಚನೆ ವೇಳೆಯೇ ಸಚಿವ ಸ್ಥಾನಕ್ಕಾಗಿ ಎಂಟಿಬಿ ನಾಗರಾಜ್ ಪಟ್ಟು ಹಿಡಿದಿದ್ದರು. ಆದರೆ, ಮೊದಲ ಹಂತದಲ್ಲಿ ಸಚಿವ ಸ್ಥಾನ  ದೊರೆತಿರಲಿಲ್ಲ. ಇದೀಗ ಸಚಿವ ಸಂಪುಟ ವಿಸ್ತರಣೆ ವೇಳೆಯೂ  ಕಾಂಗ್ರೆಸ್‌ನಿಂದ ಎಂಟಿಬಿ ನಾಗರಾಜ್ ಬದಲಿಗೆ ಅದೇ ಕುರುಬ ಸಮುದಾಯಕ್ಕೆ ಸೇರಿದ ಸಿ.ಎಸ್ .ಶಿವಳ್ಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿರುವ ನಾಗರಾಜ್ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಸಚಿವ ಸ್ಥಾನ ದೊರೆಯದಿದ್ದರೆ ಕೊನೆಯ ಪಕ್ಷ ಬಿಡಿಎ ಅಧ್ಯಕ್ಷ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇವೆರಡರ ಪೈಕಿ ಒಂದು ದೊರಕುವ ಭರವಸೆ ದೊರೆಯದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ. ಮಂಗಳವಾರದ ಒಳಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮಂಗಳವಾರ ನನ್ನ ಅಂತಿಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಭೀಮಾನಾಯ್ಕ: ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿ, ಬಂಜಾರ ಸಮುದಾಯದ ಕೋಟಾದಡಿ ನನಗೆ ಸಚಿವ ಸ್ಥಾನ ಸಿಗಬೇಕು. ಅದಕ್ಕಾಗಿ ಸಚಿವ ಸಂಪುಟ ವಿಸ್ತರಣೆಯವರೆಗೂ ಕಾಯುತ್ತೇವೆ. ನಮ್ಮ
ನಾಯಕರಾದ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅವರ ಜತೆ ಮಾತನಾಡುತ್ತೇವೆ. ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದರು. ಈ ವೇಳೆ ಬಂಡಾಯದ ಬಾವುಟ ಹಾರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ಬೇರೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನೂ ಆಕಾಂಕ್ಷಿ: ನಾಗೇಂದ್ರ ಮತ್ತೊಂದೆಡೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರೂ ಕೂಡ ಸಚಿವ ಸ್ಥಾನದ ಬಗ್ಗೆ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಬಳ್ಳಾರಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಶುರುವಾದ ಅಸಮಾಧಾನವು ಮತ್ತಷ್ಟು ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಅವರೂ ಸಹ ಅಸಮಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ನಾಗೇಂದ್ರ, ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಸಚಿವ ಸ್ಥಾನಕ್ಕೆ ಬೇಡಿಕೆ ಇಡುವ ಸಲುವಾಗಿ ಬಂದಿದ್ದೇನೆ ಎಂದು ಹೇಳಿದರು. 

Follow Us:
Download App:
  • android
  • ios