`ಅನುಷ್ಠಾನ ಮಾಡಲು ಸಾಧ್ಯವಾಗದೇ ಇರುವ ತೀರ್ಪನ್ನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ'
ಬೆಂಗಳೂರು(ಸೆ.21): ತಮಿಳುನಾಡಿಗೆ ನೀರು ಬಿಡುವುದು ಬೇಡವೆಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಒಕ್ಕೊರಲ ಕೂಗು ಕೇಳಿಬಂದಿದೆ. ಸಭೆ ಆರಂಭವಾಗುತ್ತಿದ್ದಂತೆ ಹಿರಿಯ ಸಚಿವರಾದ ರಮೇಶ್ ಕುಮಾರ್, ಟಿ.ಬಿ. ಜಯಚಂದ್ರ ನೀರು ಬಿಡುವುದು ಬೇಡ, ರಾಜ್ಯದ ಜನರ ಅಭಿಪ್ರಾಯ ಸಹ ಇದೇ ಆಗಿದೆ. ಕಠಿಣ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದೇವೆ ಎಂದು ಒತ್ತಾಯಿಸಿದ್ದಾರೆ.
ಇದೇವೇಳೆ, ಸಚಿವ ಟಿ.ಬಿ. ಜಯಚಂದ್ರ ಒಂದು ತೀರ್ಪಿನ ಪ್ರತಿಯನ್ನ ಸಿಎಂ ಮುಂದಿಟ್ಟರು. ಅದು ನಿನ್ನೆಯಷ್ಟೇ ನ್ಯಾ. ಉದಯ್ ಲಲಿತ್ ಇನ್ನೊಂದು ಪ್ರಕರಣದಲ್ಲಿ ನೀಡಿದ್ದ ತೀರ್ಪು. ಯಾರೇ ಆಗಲಿ ಅನುಷ್ಠಾನ ಮಾಡಲು ಸಾಧ್ಯವಾಗದೇ ಇರುವ ತೀರ್ಪನ್ನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು ತಿಳಿಸಿದರು. ಈ ಅಭಿಪ್ರಾಯಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದ್ದಾರೆ.
