"ನೋಟು ಅಮಾನ್ಯೀಕರಣ ಮಾಡಿದಾಕ್ಷಣ ಭ್ರಷ್ಟಾಚಾರ ಪೂರ್ಣ ನಿಲ್ಲೋದಿಲ್ಲವೆಂಬುದು ನಿಜ. ಆದರೆ, ನೋಟ್'ಬ್ಯಾನ್'ನಿಂದ ನಾವು ಪಥ ಬದಲಿಸಿಕೊಳ್ಳಲು ಸಾಧ್ಯವಾಯಿತು. ಕಡಿಮೆ ಕ್ಯಾಷ್ ಇರುವ ಅರ್ಥವ್ಯವಸ್ಥೆಯತ್ತ ನಾವು ಹೆಜ್ಜೆ ಹಾಕಲು ನೆರವಾಯಿತು. ಭ್ರಷ್ಟಾಚಾರಿಗಳಿಗೆ ಹಾದಿ ಕಠಿಣವಾಯಿತು. ಭಯೋತ್ಪಾದನೆಗೆ ಹಣ ಸರಬರಾಜು ಆಗುವುದು ನಿಂತಿತು."
ನವದೆಹಲಿ(ನ. 07): ನೋಟು ಅಮಾನ್ಯ ಮಾಡಿ ಪ್ರಧಾನಿ ಮೋದಿ ಮಾಡಿದ ದಿಢೀರ್ ಘೋಷಣೆ ಆಗಿ ನಾಳೆಗೆ ಸರಿಯಾಗಿ 1 ವರ್ಷ. ನೋಟ್ ಬ್ಯಾನ್ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಈಗಲೂ ಬಿಸಿಬಿಸಿ ಚರ್ಚೆಯಾಗುತ್ತಿದೆ. ನೋಟು ಬ್ಯಾನು ಭಾರತದ ಇತಿಹಾಸದಲ್ಲೇ ಅತ್ಯಂತ ದುರಂತದ ಕ್ರಮ ಎಂದು ಪ್ರತಿಪಕ್ಷಗಳು ವಾದ ಮಾಡುತ್ತಿವೆ. ನೋಟು ಬ್ಯಾನು ಕಾಳಧನಿಕರನ್ನು ಹಣಿಯಲು ಒಂದು ಹೆಜ್ಜೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಮತ್ತು ಅರುಣ್ ಜೇಟ್ಲಿ ನಡುವೆ ಈ ವಿಚಾರದಲ್ಲಿ ಮಾತಿನ ಸಮರವೇ ನಡೆದಿದೆ. ಅವರಿಬ್ಬರು ಈ ಬಗ್ಗೆ ಏನೇನು ಹೇಳಿದ್ದಾರೆ ಎಂಬುದು ಇಲ್ಲಿದೆ...
ನೋಟ್ ಬ್ಯಾನ್ ಬಗ್ಗೆ ಮನಮೋಹನ್ ಸಿಂಗ್ ಹೇಳೋದೇನು?
* ನೋಟ್ ಬ್ಯಾನ್ ಒಂದು ವ್ಯವಸ್ಥಿತ ಲೂಟಿ
* ಪ್ರಜಾತಾಂತ್ರಿಕ ದೇಶವೊಂದು ಒಂದೇ ಏಟಿಗೆ ದೇಶದ ಶೇ.86 ಕರೆನ್ಸಿ ನೋಟುಗಳನ್ನ ಹಿಂಪಡೆದದ್ದು ಇದೇ ಮೊದಲು
* 500 ಮತ್ತು 1000 ರು ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಅವಕ್ಕಿಂತಲೂ ಹೆಚ್ಚು ಮುಖಬೆಲೆಯ 2000 ರೂ ನೋಟುಗಳನ್ನು ಚಾಲ್ತಿಗೆ ತಂದದ್ದು ಇನ್ನೂ ದೊಡ್ಡ ದುರಂತ.
* 2016ರ ನ.8ರಂದು ಕೇಂದ್ರ ಸರಕಾರ ಇಂಥದ್ದೊಂದು ಅಸಂಬದ್ಧ ಕ್ರಮವನ್ನು ಜಾರಿಗೆ ತರಲು ಯಾವ ಪುಣ್ಯಾತ್ಮ ಸಲಹೆ ಕೊಟ್ಟರೋ ಎಂದು ಈಗಲೂ ಅಚ್ಚರಿ ಪಡುತ್ತಿದ್ದೇನೆ.
* ಕಪ್ಪು ಹಣ ಮತ್ತು ತೆರಿಗೆ ವಂಚನೆಯು ಈ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳಾಗಿವೆ. ಆದರೆ, ನೋಟು ಅಮಾನ್ಯೀಕರಣವು ಖಂಡಿತ ಇದಕ್ಕೆ ಪರಿಹಾರವಲ್ಲ.
* ನೋಟು ಅಮಾನ್ಯೀಕರಣದಿಂದ ಸಮಾಜದ ಅಸಮಾನತೆ ಇನ್ನಷ್ಟು ಹೆಚ್ಚಾಯಿತು. ಅಷ್ಟೇ ಅಲ್ಲ, ಭಾರತದಂಥ ದೇಶಕ್ಕೆ ಇದು ಬೃಹತ್ ಸಾಮಾಜಿಕ ಕೆಡುಕಾಗಿ ಪರಿಣಮಿಸಿದೆ.
* ನೋಟ್ ನಿಷೇಧದಿಂದಾಗಿ ದೇಶದ ಜಿಡಿಪಿ ಶೇ.5.7ಕ್ಕೆ ಇಳಿಕೆಯಾಗಿದೆ. ಅಸಂಘಟಿತ ವಲಯಗಳ ಮೇಲೆ ನೋಟ್ ಬ್ಯಾನ್ ಮಾಡಿರುವ ಅನಾಹುತವನ್ನು ಸರಿಯಾಗಿ ಪರಿಗಣಿಸಿದರೆ ಜಿಡಿಪಿ ದರ ಇನ್ನೂ ಪ್ರಪಾತಕ್ಕೆ ಇಳಿಯುವುದರಲ್ಲಿ ಅನುಮಾನವೇ ಇಲ್ಲ.
---------
ಅರುಣ್ ಜೇಟ್ಲಿ ವಾದವೇನು?
* ಯುಪಿಎ ಸರಕಾರದ ಅವಧಿಯಲ್ಲಿ 2ಜಿ ಸ್ಪೆಕ್ಟ್ರಂ, ಕಾಮನ್'ವೆಲ್ತ್ ಗೇಮ್ಸ್, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳ ಮೂಲಕ ಮಾಡಿದ್ದು ಲೂಟಿ.
* ನೋಟು ಅಮಾನ್ಯೀಕರಣವು ನೈತಿಕತೆಯ ಆಧಾರದ ಮೇಲೆ ಮಾಡಿದ ಆರ್ಥಿಕ ಪ್ರಯೋಗವಾಗಿದೆ. ನೈತಿಕವಾಗಿ ಯಾವುದು ಸರಿಯೋ ಅದು ರಾಜಕೀಯವಾಗಿಯೂ ಸರಿಯೇ.
* ಯುಪಿಎ ಸರಕಾರದ ಅವಧಿಯಲ್ಲಿ ನೀತಿಗೆ ಗರಬಡಿದಿತ್ತು. ಮೋದಿ ಸರಕಾರವು ವಿವಿಧ ಸುಧಾರಣೆಗಳ ಮೂಲಕ ದೇಶದ ಅಭಿವೃದ್ಧಿಗೆ ಮತ್ತು ಸ್ವಚ್ಛ ಆರ್ಥಿಕತೆಗೆ ಮುಂದಡಿ ಇಟ್ಟಿದ್ದಾರೆ.
* ನಿಂತ ನೀರಂತಿರುವ ಅರ್ಥವ್ಯವಸ್ಥೆಯನ್ನು ಅಲುಗಾಡಿಸುವ ಮೂಲಕ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ ಎಂಬ ತತ್ವವನ್ನು ಬಿಜೆಪಿ ನಂಬಿಕೊಂಡಿದೆ.
* ಕಾಂಗ್ರೆಸ್ ಸರಕಾರಗಳು ಈ ಹಿಂದೆ ಯಾವತ್ತೂ ಕೂಡ ಕಪ್ಪುಹಣದ ವಿರುದ್ಧ ಇಷ್ಟು ದೊಡ್ಡ ಕ್ರಮ ಕೈಗೊಂಡಿದ್ದಿಲ್ಲ.
* ಕಾಂಗ್ರೆಸ್'ನ ಘನ ಉದ್ದೇಶವು 'ಕುಟುಂಬ' ಸೇವೆಯಾಗಿದೆ; ಬಿಜೆಪಿಯದ್ದು ದೇಶ ಸೇವೆಯಾಗಿದೆ.
* ಹೆಚ್ಚು ತೆರಿಗೆಯ ಹರಿವು ಹಾಗೂ ಕಡಿಮೆ ನಗದು ವಹಿವಾಟು ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುವುದು ನೋಟ್'ಬ್ಯಾನ್'ನ ಉದ್ದೇಶವಾಗಿತ್ತು.
* ನೋಟು ಅಮಾನ್ಯೀಕರಣ ಮಾಡಿದಾಕ್ಷಣ ಭ್ರಷ್ಟಾಚಾರ ಪೂರ್ಣ ನಿಲ್ಲೋದಿಲ್ಲವೆಂಬುದು ನಿಜ. ಆದರೆ, ನೋಟ್'ಬ್ಯಾನ್'ನಿಂದ ನಾವು ಪಥ ಬದಲಿಸಿಕೊಳ್ಳಲು ಸಾಧ್ಯವಾಯಿತು. ಕಡಿಮೆ ಕ್ಯಾಷ್ ಇರುವ ಅರ್ಥವ್ಯವಸ್ಥೆಯತ್ತ ನಾವು ಹೆಜ್ಜೆ ಹಾಕಲು ನೆರವಾಯಿತು. ಭ್ರಷ್ಟಾಚಾರಿಗಳಿಗೆ ಹಾದಿ ಕಠಿಣವಾಯಿತು. ಭಯೋತ್ಪಾದನೆಗೆ ಹಣ ಸರಬರಾಜು ಆಗುವುದು ನಿಂತಿತು.
* ದೇಶದ ಅಭಿವೃದ್ಧಿ ಮತ್ತು ಬಡವರ ಏಳ್ಗೆಗಾಗಿ ಇರುವ ಸಂಪನ್ಮೂಲಗಳು ಸಿರಿವಂತರ ಜೇಬಿನಲ್ಲಿರುವುದು ಅನ್ಯಾಯ. ನೋಟು ನಿಷೇಧವು ಅವರ ಜೇಬಿನಿಂದ ಹಣ ಕಸಿದುಕೊಳ್ಳಲು ಸಾಧ್ಯವಾಯಿತು.
