ಮುಂಬೈ :   ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆಯ ಶುಭ  ಕಾರ್ಯಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. 

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ವಿವಾಹ ಸಮಾರಂಭ ಇದೇ ಡಿಸೆಂಬರ್ 12 ರಂದು ಉದಯ್ ಪುರದ ಅರಮನೆಯಲ್ಲಿ ನಡೆಯಲಿದ್ದು,  ಈಗಾಗಲೇ ರಾಯಲ್ ಫ್ಯಾಮಿಲಿಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದೆ. 

ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ವಿವಾಹ ನಡೆಯುವ ಉದಯ್ ಪುರ ಅರಮನೆಯನ್ನು ಸ್ವರ್ಗದಂತೆ ಶೃಂಗಾರ ಮಾಡಲಾಗುತ್ತಿದೆ.  ಅಲ್ಲಿ ಕಾರ್ಯ ನಿರ್ವಹಿಸುವವರಿಗೂ ಅಂಬಾನಿ ಕುಟುಂಬ ಡಿಸೈನರ್ ಉಡುಪುಗಳ ಡ್ರೆಸ್ ಕೋಡ್ ಸಿದ್ಧ ಮಾಡಿದೆ. 

ಉದಯ್ ಪುರ ಅರಮನೆಯಲ್ಲಿ ಡಿಸೆಂಬರ್ 8 - 9 ರಂದು ನಡೆಯುವ ವಿವಾಹ ಪೂರ್ವ ಸಮಾರಂಭದಲ್ಲಿ ಆಗಮಿಸುವ ಗೆಸ್ಟ್ ಗಳ ಉಪಚಾರಕ್ಕೆ ನೇಮಿಸಿದ ಸಿಬ್ಬಂದಿಗೆ ಬಾಲಿವುಡ್ ಸ್ಟಾರ್ ಡಿಸೈನರ್ ಮನೀಶ್ ಮಲ್ಹೋತ್ರಾ ಉಡುಪು ತಯಾರಿಸಿದ್ದಾರೆ . 

 ಸಮಾರಂಭಕ್ಕೆ ಆಗಮಿಸುವ ಗಣ್ಯರ ಉಪಚಾರಕ್ಕೆ ಪ್ರಸಿದ್ಧ ಔರಂಗಬಾದ್ ಐಎಚ್ ಎಂ ವಿದ್ಯಾರ್ಥಿಗಳು ಆಗಮಿಸಲಿದ್ದು, ಇವರೆಲ್ಲರೂ ಕೂಡ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಉಡುಪು ತೊಡಲಿದ್ದಾರೆ. 

ಒಟ್ಟು 200 ಮಂದಿ ವಿದ್ಯಾರ್ಥಿಗಳು ಸಮಾರಂಭದಲ್ಲಿ ಅತಿಥಿಗಳ ಉಪಚಾರಕ್ಕೆ ಆಗಮಿಸುತ್ತಿದ್ದಾರೆ. ಭಾರತ, ದೇಶ ವಿದೇಶಗಳಿಂದಲೂ ರಾಜಕೀಯ ಕ್ಷೇತ್ರದ, ವ್ಯವಹಾರಿಕ ಕ್ಷೇತ್ರದ ಗಣ್ಯರು ಅಂಬಾನಿ ಕುಟುಂಬದ ವಿವಾಹ ಸಮಾರಂಭಕ್ಕೆ ಆಗಮಿಸಲಿದ್ದಾರೆ. 

ಇಷ್ಟೇ ಅಲ್ಲದೇ ಉದಯ್ ಪುರ ಅರಮನೆಯಲ್ಲಿ ಅಂದು ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗೂ ಕೂಡ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿರುವ ಉಡುಪುಗಳನ್ನೇ ನೀಡಲಾಗುತ್ತದೆ. ಒಟ್ಟಿನಲ್ಲಿ ರಾಯಲ್ ಕುಟುಂಬದ ವೆಡ್ಡಿಂಗ್  ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.