ಮಂಡ್ಯ (ಫೆ. 16):  ಶ್ರಮಿಕ ವರ್ಗದಿಂದಲೇ ತುಂಬಿರುವ ಭಾರತೀನಗರದ ಸಮೀಪದ ಗುಡಿಗೆರೆ ಕಾಲೋನಿ ಒಂದು ಪುಟ್ಟಗ್ರಾಮ. ಇಲ್ಲಿನ ದುಡಿದು ತಿನ್ನುವ ಅನೇಕ ಕುಟುಂಬಗಳಲ್ಲಿ ವೀರಯೋಧ ಎಚ್‌.ಗುರುವಿನ ಕುಟುಂಬವೂ ಒಂದು. ಇಡೀ ಕುಟಂಬಕ್ಕೆ ದಶಕದಿಂದ ಆಶ್ರಯದಾತನಾಗಿದ್ದ ಯೋಧ ಗುರು ದೇಶಕ್ಕಾಗಿ ಬಲಿದಾನವಾಗಿದ್ದಾನೆ ಎಂಬ ವಿಷಯ ತಿಳಿದ ಇಡೀ ಕುಟುಂಬ, ಗ್ರಾಮ ಇದೀಗ ದುಃಖದಲ್ಲಿ ಮುಳುಗಿದೆ.

ವೀರಯೋಧ ಎಚ್‌.ಗುರು ವನ್ನು ನೆನೆದು ಅತ್ತವರು, ಹಳೆಯ ದಿನಗಳನ್ನು ಆತನೊಂದಿಗೆ ಕಳೆದ ಸ್ನೇಹಿತರು ದುಃಖದಲ್ಲಿದ್ದರು. ಗ್ರಾಮದಲ್ಲಿ ಈಗ ನೀರವ ಮೌನ. ಎಲ್ಲರ ಕಣ್ಣಲ್ಲೂ ಕಣ್ಣೀರ ಧಾರೆ. ಪ್ರೀತಿಯ ಪುತ್ರನನ್ನು ಕಳೆದುಕೊಂಡ ದುಖ ಎಲ್ಲರ ಮನದಲ್ಲೂ. ಗ್ರಾಮಕ್ಕೆ ಗ್ರಾಮವೇ ಗುರುವಿನ ಪಾರ್ಥಿವ ಶರೀರಕ್ಕಾಗಿ ಕಾತರದಿಂದ ಕಾಯುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಯೋಧನ ಮನೆಗೆ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಶಾಸಕ ಅನ್ನದಾನಿ, ತಹಸೀಲ್ದಾರ್‌ ಗೀತಾ ಭೇಟಿ ನೀಡಿ ಸಾಂತ್ವನ ಹೇಳಿದರು.

ಮಗ ಮೃತಪಟ್ಟಿಲ್ಲ ಎಂಬ ನಂಬಿಕೆ:

ಯೋಧ ಗುರು ಮೃತಪಟ್ಟಿರುವ ಸುದ್ದಿಯನ್ನು ಆತನ ತಾಯಿ ಚಿಕ್ಕೋಳಮ್ಮ, ಪತ್ನಿ ಕಲಾವತಿ ಯಾವುದೇ ಕಾರಣಕ್ಕೂ ನಂಬಲಿಲ್ಲ. ಆತ ಸಾಯುವ ವ್ಯಕ್ತಿಯೇ ಅಲ್ಲ. ಬಂದೇ ಬರುತ್ತಾನೆ. ನಮ್ಮನ್ನು ನಂಬಿಸುವ ಪ್ರಯತ್ನ ಮಾಡಬೇಡಿ ಎಂದು ಜೋರಾಗಿ ಸಾಕಷ್ಟುದುಃಖದಿಂದಲೇ ಹೇಳುತ್ತಿದ್ದರು. ನಾವು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ನನ್ನ ಮಗನಿಗೆ ಏನೂ ಆಗುವುದು ಬೇಡ ಎಂದು ಹೇಳುತ್ತಲೇ ಇದ್ದರು ಗುರುವಿನ ತಾಯಿ ಚಿಕ್ಕೋಳಮ್ಮ.

ಅಸ್ವಸ್ಥರಾದ ತಂದೆ:

ವೀರಯೋಧ ಗುಡಿಗೆರೆ ಎಚ್‌ .ಗುರು ಸಾವಿನ ಸುದ್ದಿ ತಿಳಿದು ಅಘಾತಕ್ಕೊಳಗಾಗಿದ್ದ ತಂದೆ ಹೊನ್ನಯ್ಯ ತೀವ್ರ ಅಸ್ವಸ್ಥರಾಗಿ ಶುಕ್ರವಾರ ಕುಸಿದು ಬಿದ್ಧ ಘಟನೆ ನಡೆಯಿತು. ಗುರುವಾರ ರಾತ್ರಿ ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಅಘಾತಕ್ಕೆ ಒಳಗಾಗಿದ್ದ ತಂದೆ ಹೊನ್ನಯ್ಯ ಊಟ, ತಿಂಡಿ ಬಿಟ್ಟಿದ್ದರು. ಶುಕ್ರವಾರ ಬೆಳಗ್ಗೆಯಿಂದ ಮಗನ ನೆನೆದು ಕಣ್ಣೀರು ಹಾಕುತ್ತ ನೋವಿನಲ್ಲಿದ್ದ ಹೊನ್ನಯ್ಯ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಸ್ಥಳಕ್ಕೆ ಬಂದ ವೈದ್ಯರು ಅಲ್ಲಿಯೇ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ಆ್ಯಂಬುಲೆಸ್ಸ್‌ ಮೂಲಕ ರವಾನಿಸಿದರು.

ಭಾವಚಿತ್ರಕ್ಕೆ ಹಾರ ಹಾಕಬೇಡಣ್ಣಾ...

ವೀರಯೋಧ ಗುರು ಸಾವನ್ನು ಅರಗಿಸಿಕೊಳ್ಳಲಾಗದ ಪತ್ನಿ ಕಲಾವತಿ ಪತಿ ಭಾವಚಿತ್ರಕ್ಕೆ ಹಾರ ಹಾಕದಂತೆ ತಡೆಯುತ್ತಿದ್ದ ದೃಶ್ಯ ಜನರ ಕರುಳು ಹಿಂಡುವಂತಿತ್ತು. ಗುಡಿಗೆರೆ ಗ್ರಾಮದ ನಿವಾಸದ ಎದುರು ಪತಿಯ ಭಾವಚಿತ್ರ ಇಟ್ಟು ಗುರುವಿನ ಸ್ನೇಹಿತರು ಹಾರ ಹಾಕಲು ಮುಂದಾದರು. ಆಗ ಪತ್ನಿ ಕಲಾವತಿ ‘ಅಣ್ಣ ಹೂವನ್ನು ಹಾಕಬೇಡಣ್ಣ’ ಎಂದು ಅಳುತ್ತಾ ಗೋಗರೆಯುತ್ತಿದ್ದ ದೃಶ್ಯ ಬಂದಿದ್ದವರಲ್ಲಿ ಕಣ್ಣೀರು ತರಿಸಿತು. ಇದರಿಂದ ಗಂಡನ ಭಾವಚಿತ್ರ ಇಡದೆ, ಹಾರ ಹಾಕದೆ ಸ್ನೇಹಿತರು ಮೌನವಾದರು.

ಓದಿದ ಶಾಲೆಯಲ್ಲಿ ಗೌರವ ಸಮರ್ಪಣೆ

ಹುತಾತ್ಮ ಯೋಧ ಗುರು ಓದಿದ ಭಾರತೀನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ಅವರು ಅಲ್ಲಿ 2004-05 - 9ನೇ ತರಗತಿಗೆ ದಾಖಲಾಗಿ 2005-06 ರಲ್ಲಿ 10ನೇ ತರಗತಿಯನ್ನು ಪೂರೈಸಿದ್ದರು.

ಸ್ನೇಹಿತರ ಪಾಲಿನ ‘ಗುರು’

ಯಾವುದೇ ಕೆಲಸವನ್ನು ಹಿಡಿದರೂ ಹಠದಿಂದ ಮಾಡುತ್ತಿದ್ದ ಯೋಧ ಗುರು ತರಬೇತಿ ವೇಳೆಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ. ಸ್ನೇಹಿತರ ಪಾಲಿನ ಗುರುವಾಗಿಯೇ ಗುರುತಿಸಿಕೊಂಡಿದ್ದ ಎಂದು ಗುರುವಿನ ಜೊತೆ ತರಬೇತಿ ಪಡೆದಿದ್ದ ಮತ್ತೊಬ್ಬ ಯೋಧ ಮಹದೇವು. ಮೈಸೂರು ಜಿಲ್ಲೆಯ ಮಹದೇವು ಸಿಆರ್‌ಪಿಎಫ್‌ಗೆ ಸೇರಿದಾಗ ಜೊತೆಗಾರನಾಗಿದ್ದು ಗುಡಿಗೆರೆ ಕಾಲೋನಿಯ ಗುರು. ತರಬೇತಿ ವೇಳೆಯಲ್ಲಿ ಎಲ್ಲಾ ಪಟುಗಳನ್ನು ಹಿಂದಾಕುತ್ತಿದ್ದನು. ಎಲ್ಲರನ್ನೂ ಮಂಡ್ಯ ಭಾಷೆಯಲ್ಲೇ ಮಾತನಾಡಿಸಿ ನಗಿಸುತ್ತಿದ್ದನು. ಹಾಗಾಗಿ ಎಲ್ಲರ ಅಚ್ಚುಮೆಚ್ಚಿನ ಗೆಳೆಯನಾಗಿ ಗುರುವಾಗಿದ್ದ ಎಂಬ ಮಾತು ಆತನ ಸ್ನೇಹಿತನ ಬಾಯಿಯಲ್ಲಿ ಹೊರಹೊಮ್ಮಿತು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಯೋಧರ ಮೇಲೆ ಕಲ್ಲು ಹೊಡೆಯುವವರನ್ನು, ಬಸ್‌ ಮೇಲೆ ಕಲ್ಲು ತೂರಾಟ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದರು.

- ಕೆ. ಎನ್ ರವಿ / ಅಣ್ನೂರು ಸತೀಶ್