ಚೆನ್ನೈನ ಎಕ್ಕಡುತಂಗಲ್‌, ತಿರುವಿಕಾ ಇಂಡಸ್ಟ್ರೀಯಲ್‌ ಪ್ರದೇಶದಲ್ಲಿರುವ ಹುಂಡೈ ಮೋಟಾರ್‌ ಸರ್ವಿಸ್ ಸೆಂಟರ್‌'ನಲ್ಲಿ 35 ರು. ಲಕ್ಷದ ಹೊಸ ಹುಂಡೈ ಸ್ಯಾಂಟಫೇ ಕಾರು (ಹೈ ಎಂಡ್‌) ಕಳವು ಮಾಡಿ ನಗರಕ್ಕೆ ತಂದಿದ್ದ.
ಬೆಂಗಳೂರು(ಮಾ. 03): ಬಹರೇನ್ ದೇಶದಲ್ಲಿ 9 ವರ್ಷಗಳ ಪೊಲೀಸ್ ಕಾನ್'ಸ್ಟೇಬಲ್ ಆಗಿದ್ದ ಪಿಲ್ಲಾಕಲ್ ನಜೀರ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. 2006ರಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಈತ, ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ. ಇತ್ತೀಚೆಗೆ ಚೆನ್ನೈನ ಎಕ್ಕಡುತಂಗಲ್, ತಿರುವಿಕಾ ಇಂಡಸ್ಟ್ರೀಯಲ್ ಪ್ರದೇಶದಲ್ಲಿರುವ ಹುಂಡೈ ಮೋಟಾರ್ ಸರ್ವಿಸ್ ಸೆಂಟರ್'ನಲ್ಲಿ 35 ರು. ಲಕ್ಷದ ಹೊಸ ಹುಂಡೈ ಸ್ಯಾಂಟಫೇ ಕಾರು (ಹೈ ಎಂಡ್) ಕಳವು ಮಾಡಿ ನಗರಕ್ಕೆ ತಂದಿದ್ದ. ಈ ಸಂಬಂಧ ತಮಿಳುನಾಡಿನ ಪೊಲೀಸರು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ನಗರದ 10 ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.
ಕಾರ್ಗಿಲ್'ನಿಂದ ಬಂದು ನಗರದಲ್ಲಿ ಕಳವು:
ಮತ್ತೊಂದು ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್'ನ ಜಾಕೀರ್ ಹುಸೇನ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. 2015ರಲ್ಲಿ ನಗರಕ್ಕೆ ಬಂದಿದ್ದ ಈತ, ಯಶವಂತಪುರದ ರೋಮನ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದು ಬಾಬಾ ಜಾಬ್ ಡಾಟ್ಕಾಂನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಹಣದಾಸೆಗೆ ಬಿದ್ದ ಆರೋಪಿ ಕೆಲಸ ಬಿಟ್ಟು ವಜ್ರ, ಚಿನ್ನಾಭರಣಗಳು, ಲ್ಯಾಪ್ಟಾಪ್ಗಳನ್ನು ಕಳವು ಮಾಡಿ ‘ಓಎಲ್ಎಕ್ಸ್' ಮೂಲಕ ಮಾರಾಟ ಮಾಡುತ್ತಿದ್ದ. ಈತನಿಂದ ರು. 14 ಲಕ್ಷ ಮೌಲ್ಯದ 13 ಲ್ಯಾಪ್ಟಾಪ್, 1 ಕ್ಯಾಮೆರಾ, 1 ಎಲ್ಇಡಿ ಟಿವಿ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
