ಐಷಾರಾಮಿ ಜೀವನಕ್ಕೆ ಮಾರು ಹೋಗಿ ಅನೇಕರು ಕಳ್ಳತನಕ್ಕೆ ಇಳಿಯುವುದು ಇದೆ. ಈತ ತನ್ನ ಪ್ರೇಯಸಿಯನ್ನು ಖುಷಿ ಪಡಿಸ್ಲಿಕ್ಕೆ ಮೋಟಾರ್ ಬೈಕ್ ಕಳ್ಳತನಕ್ಕೆ ಇಳಿದಿದ್ದನಂತೆ!

ಬೆಂಗಳೂರು: ಪ್ರೇಯಸಿ ಜತೆ ಜಾಲಿ ರೈಡ್‌ ಮತ್ತು ಮೋಜಿನ ಜೀವನಕ್ಕಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬ ಕೋರಮಂಗಲ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬೊಮ್ಮನಹಳ್ಳಿಯ ಕಾರ್ತಿಕ್‌ ಅಲಿಯಾಸ್‌ ಕಾಕ(26) ಬಂಧಿತನಾಗಿದ್ದಾನೆ. ಆರೋಪಿಯಿಂದ 6 ಲಕ್ಷ ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ತಿಕ್‌ಗೆ ಈ ಮೊದಲೇ ವಿವಾಹವಾಗಿದ್ದ. ಆದರೆ, ಕಾರ್ತಿಕ್‌ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋದ ಹಿನ್ನೆಲೆಯಲ್ಲಿ ಪತ್ನಿ, ಪತಿಯಿಂದ ದೂರುವಾಗಿದ್ದಳು. ಹೀಗಾಗಿ ಆರೋಪಿ ಮತ್ತೊಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ. ಪ್ರೇಯಸಿಗೆ ಬೈಕ್‌ನಲ್ಲಿ ಜಾಲಿ ರೈಡ್‌ ಹೋಗುವುದೆಂದರೆ ಪ್ರೀತಿ. ಅಲ್ಲದೆ, ಆಕೆ ಒಂದು ಬಾರಿ ಜಾಲಿರೈಡ್‌ ಹೋದ ಬೈಕ್‌ನ್ನಲ್ಲಿ ಮತ್ತೆ ಹೋಗಲು ಪ್ರೇಯಸಿ ಒಪ್ಪುತ್ತಿರಲಿಲ್ಲ. ಅದರಲ್ಲೂ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಜಾಲಿ ರೈಡ್‌ ಹೋಗಲು ಇಷ್ಟಪಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕಾರ್ತಿಕ್‌ ಪ್ರೇಯಸಿಗಾಗಿ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳನ್ನು ಕಳವು ಮಾಡಿ ಕದ್ದ ಬೈಕ್‌ನಲ್ಲಿ ಜಾಲಿರೈಡ್‌ ಕರೆದೊಯುತ್ತಿದ್ದ.

ಬಳಿಕ ಕದ್ದ ಬೈಕ್‌ಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.