ನಗ್ನಗೊಳಿಸಿ, ಮರಕ್ಕೆ ಕಟ್ಟಿ ಹೊಡೆದು ಕೊಂದರು | ಮಹಿಳೆ ಆಸ್ಪತ್ರೆಗೆ ದಾಖಲು | ಪತಿಯಿಂದ ಕೃತ್ಯ
ಯಾದಗಿರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ನಗ್ನಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಹೊಸಹಳ್ಳಿ (ಕೆ) ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹೊಸಹಳ್ಳಿ (ಕೆ) ನಿವಾಸಿ ಇಸಾಕ್ ಅಬ್ರಾಹಿಂ (32) ಸಾವನ್ನಪ್ಪಿದ ವ್ಯಕ್ತಿ. ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಅದೇ ಗ್ರಾಮದ ಏಸುಮಿತ್ರ ಎನ್ನುವ ವ್ಯಕ್ತಿ, ತನ್ನ ಕುಟುಂಬಸ್ಥರೊಂದಿಗೆ ಸೇರಿ, ತನ್ನ ಪತ್ನಿ ನಿರ್ಮಲಾ ಹಾಗೂ ಇಸಾಕ್‌ನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಇಸಾಕ್‌ನನ್ನು ಬೆತ್ತಲೆಗೊಳಿಸಿದ್ದರಿಂದ ಯಾರೂ ಕೂಡ ಬಿಡಿಸಲು ಹೋಗಿಲ್ಲ ಎಂದು ತಿಳಿದುಬಂದಿದೆ. ಮರದ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಇಸಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತ್ತ ನಿರ್ಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಇಸಾಕ್ ತಂದೆ ಮತ್ತು ನಿರ್ಮಲಾ ಅವರುಗಳು ಅಕ್ರಮ ಸಂಬಂಧವನ್ನು ನಿರಾಕರಿಸಿದ್ದಾರೆ.
ಆಗಿದ್ದೇನು?:
ಸಾಕ್ ಮತ್ತು ಏಸುಮಿತ್ರ ಒಂದೇ ಗ್ರಾಮದ ಅಕ್ಕಪಕ್ಕದ ಮನೆಯವರು. ಇಸಾಕ್ ಮತ್ತು ಏಸುಮಿತ್ರನ ಪತ್ನಿ ನಿರ್ಮಲಾಳೊಂದಿಗೆ ಕಳೆದ ಎರಡು ವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಏಸುಮಿತ್ರ ಖಾಸಗಿ ಕೆಲಸದ ನಿಮಿತ್ತ ಪದೇ ಪದೇ ಬೆಂಗಳೂರಿಗೆ ಹೋಗುತ್ತಿದ್ದ. ಇತ್ತೀಚೆಗೆ ಏಸುಮಿತ್ರ ಬೆಂಗಳೂರಿಗೆ ಹೋಗಿದ್ದ. ಇಸಾಕ್ ಮತ್ತು ನಿರ್ಮಲಾ ಗುರುವಾರ ರಾತ್ರಿ ತಮ್ಮ ಮನೆಯಲ್ಲಿಯೇ ರಾಸಲೀಲೆ ಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ತಡರಾತ್ರಿ ಏಸುಮಿತ್ರ ಮನೆಗೆ ಬಂದು ನೋಡಿದಾಗ ಇಬ್ಬರೂ ಒಟ್ಟಿಗೇ ಇದ್ದರು. ಇದನ್ನು ನೋಡಿ ಕ್ರುದ್ಧಗೊಂಡ ಏಸುಮಿತ್ರ ಇಬ್ಬರನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ್ದಾನೆ.
ಶುಕ್ರವಾರ ಬೆಳಗ್ಗೆ ಏಸು ಮಿತ್ರ, ಆತನ ತಂದೆ, ತಾಯಿ ಇತರರು ನಿರ್ಮಲಾಳನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಇಸಾಕ್ ನನ್ನು ನಗ್ನಗೊಳಿಸಿ, ಮತ್ತೊಂದು ಮರಕ್ಕೆ ಕಟ್ಟಿಹಾಕಿದ್ದಾರೆ. ಆತನನ್ನು ಬೆತ್ತಲೆಗೊಳಿಸಿದ್ದರಿಂದ ಯಾರೂ ಕೂಡ ಬಿಡಿಸಲು ಹೋಗಿಲ್ಲ ಎನ್ನಲಾಗಿದೆ.
ಇಸಾಕ್’ನನ್ನು ಏಸುಮಿತ್ರ ಮತ್ತವನ ಕುಟುಂಬಸ್ಥರು ಬಡಿಗೆಯಿಂದ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಇಸಾಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಧರ್ಮದೇಟಿಗೆ ತೀವ್ರ ಗಾಯಗೊಂಡ ಮಹಿಳೆಯನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಕೊಲೆ ಮಾಡಿದ ಆರೋಪಿ ಏಸುಮಿತ್ರ ನನ್ನು ಗುರುಮಠ್ಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಭಯದ ವಾತಾವರಣವಿದೆ. ಜಿಲ್ಲೆಯಲ್ಲಿ ಅಕ್ರಮ ಸಂಬಂಧ ದಿಂದ ಇದು ನಾಲ್ಕನೇ ಭೀಕರ ಹತ್ಯೆಯಾಗಿದೆ.
