ಚೆನ್ನೈ(ಜು.12): ಗೆಳೆತನಕ್ಕೆ ವೃತ್ತಿಯ, ಅಂತಸ್ತಿನ ಹಂಗೆಲ್ಲಿ?. ಕೃಷ್ಣ-ಸುಧಾಮನ ಗೆಳೆತನದ ಕಹಾನಿ ಕೇಳಿ ಬೆಳೆದ ಸಮಾಜ ನಮ್ಮದು. ಸಾಹುಕಾರನಿಗೆ ಸಾಹುಕಾರ ಗೆಳೆಯನಾದರೆ, ಬಡವನಿಗೆ ಬಡವ ಗೆಳೆಯ. ಹಾಗೆಯೇ ಕಳ್ಳನಿಗೆ ಕಳ್ಳ ಗೆಳೆಯ. ಕಳ್ಳನೆಂಬ ಮಾತ್ರಕ್ಕೆ ಗೆಳೆತನದಲ್ಲಿ ಮೋಸ ಇರಲು ಸಾಧ್ಯವೇ?.

ಇದಕ್ಕೆ ಪುಷ್ಠಿ ಎಂಬಂತೆ ತಮಿಳುನಾಡಿನ ಚೆನ್ನೈನಲ್ಲಿ ಕಳ್ಳನೊಬ್ಬ ಜೈಲೂಟ ಮತ್ತು ಜೈಲಿನ ಸಹ ಕೈದಿಗಳ ಗೆಳೆತನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೆನಿಸಿ, ಬೈಕ್ ಕದ್ದು ಮತ್ತೆ ಜೈಲಿಗೆ ಕೈದಿಯಾಗಿ ಹೋಗಿದ್ದಾನೆ.

ಹೌದು, ಇಲ್ಲಿನ 52 ವರ್ಷದ ಗಣಪ್ರಕಾಶಂ ಎಂಬಾತ ಕಳ್ಳತನ ಮಾಡಿ ಹಲವು ಬಾರಿ ಜೈಲು ಸೇರಿದ್ದಾನೆ. ಗಣಪ್ರಕಾಶಂ ಗೆ ಜೈಲೂಟ ಮತ್ತು ಅಲ್ಲಿನ ಸಹ ಕೈದಿಗಳ ಗೆಳೆತನ ಅತ್ಯಂತ ಪ್ರೀಯವಾದದ್ದು. ಆದರೆ ಕಳೆದ ಮಾರ್ಚ್’ನಲ್ಲಿ ಗಣಪ್ರಕಾಶಂ ಶಿಕ್ಷೆ ಅವಧಿ ಪೂರ್ಣಗೊಂಡ ಪರಿಣಾಮ ಜೈಲಿನಿಂದ ಬಿಡುಗಡೆಗೊಂಡಿದ್ದ.

ಜಗತ್ತಿನ ಎಲ್ಲ ಅಪರಾಧಿಗಳೂ ಜೈಲಿನಿಂದ ಹೊರ ಬರುವುದನ್ನು ಕಾಯುತ್ತಿದ್ದರೆ, ಗಣಪ್ರಕಾಶಂ ಮಾತ್ರ ತಾನು ಮತ್ತೆ ಯಾವಾಗ ಜೈಲಿಗೆ ಹೋಗುತ್ತೇನೆ ಎಂದು ಕಾಯುತ್ತಿದ್ದ. ಅದರಂತೆ ಮತ್ತೆ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದು ಉದ್ದೇಶಪೂರ್ವಕವಾಗಿ ತನ್ನ ಮುಖ ಸಿಸಿಟಿವಿಯಲ್ಲಿ ತೋರಿಸಿದ್ದಾನೆ.

ಬೈಕ್ ಕದ್ದ ಆರೋಪದ ಮೇಲೆ ಮತ್ತೆ ಗಣಪ್ರಕಾಶಂನನ್ನು ಮತ್ತೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಜೈಲಿನ ಊಟ ಮತ್ತು ಸಹ ಕೈದಿಗಳ ಗೆಳೆತನ ಬಯಸಿ ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.