Asianet Suvarna News Asianet Suvarna News

ಈ ದೇಶದ್ ಗತಿ ಇಷ್ಟೇ ಕಣಮ್ಮೋ: ಖಾದಿ ದರ್ಪಕ್ಕೆ ಖಾಕಿ ಮೌನ!

ರಾಜಕಾರಣಿಯೊಬ್ಬರು ಯುವಕನನ್ನು ನಡುರಸ್ತೆಯಲ್ಲೇ ರಕ್ತ ಬರುವಂತೆ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿಗಳು ರಾಜಕಾರಣಿಯನ್ನು ತಡೆಯದೇ ಘಟನೆ ವೀಕ್ಷಿಸುತ್ತಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.

man had been beaten publicly in delhi by local leader video went viral
Author
New Delhi, First Published Dec 2, 2018, 3:42 PM IST

ಆಮ್ ಆದ್ಮಿ ಪಾರ್ಟಿಯ ದೆಹಲಿಯ ಪುರ್ವಾಂಚಲ್ ಮೋರ್ಚಾದ ಸಹ ಕಾರ್ಯದರ್ಶಿ ಹಾಗೂ ಕರಾಡಿಯ ಆಪ್ ಶಾಸಕ ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ದೊಣ್ಣೆಯಿಂದ ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಪೊಲೀಸರು ಕೂಡಾ ಕೈ ಕಟ್ಟಿ ನಿಂತಿದ್ದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಇನ್ನು ಪೆಟ್ಟು ತಿಂದ ವ್ಯಕ್ತಿಯು ಚುಡಾಯಿಸುತ್ತಿದ್ದ ಆರೋಪವಿದೆ. ಸದ್ಯ ಏಟು ತಿಂದ ಯುವಕ ರಾಜಕೀಯ ನಾಯಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆಂದು ಹೇಳಲಾಗಿದೆ.

ದೊಣ್ಣೆಯಿಂದ ಏಟು ತಿನ್ನುತ್ತಿರುವ ವ್ಯಕ್ತಿಯ ವಿಡಿಯೋ ಒಂದು ವೈರಲ್ ಅಗುತ್ತಿದ್ದು, ಇದು ದೆಹಲಿ ಹೊರವಲಯ ಕರಾಡಿಯಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ನವೆಂಬರ್ 14 ರಂದು ಬೆಳ್ಳಂ ಬೆಳಗ್ಗೆ ವಿಕಾಸ್ ಹೆಸರಿನ ಯುವಕನನ್ನು ಆಪ್ ಶಾಸಕ ಥಳಿಸಿದ್ದು, ಬಳಿಕ ಆತನ ಬಟ್ಟೆಗಳನ್ನೂ ಹರಿದು ಹಾಕಿದ್ದಾರೆ ಎನ್ನಲಾಗಿದೆ. ಯುವಕ ಅಲ್ಲಿನ ಮಹಿಳೆಯರನ್ನು ಚುಡಾಯಿಸುತ್ತಿದ್ದ ಆರೋಪವೂ ಕೇಳಿ ಬಂದಿದೆ. ಆದರೆ ಘಟನಾ ಸ್ಥಳದಲ್ಲಿ ನಾಲ್ವರು ಪೊಲೀಸರೂ ಕಂಡು ಬಂದಿದ್ದು, ಆಪ್ ನಾಯಕ ನಿರ್ದಯವಾಗಿ ಹೊಡೆಯುತ್ತಿದ್ದಾಗ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಮಾತ್ರ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ವಾಸ್ತವವಾಗಿ ವಿಕಾಸ್ ಕಿರಾಡಿಯ ಪ್ರೇಮ್ ನಗರ್ ನಿವಾಸಿಯಾಗಿದ್ದು, ಆತನ ಹಾಗೂ ಆತನ ತಮ್ಮನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ವಿಕಾಸ್ ಸಹೋದರನ ವಿರುದ್ಧ 2 ವರ್ಷಗಳ ಹಿಂದೆ ಗ್ಯಾಂಗ್‌ ರೇಪ್ ಪ್ರಕರಣವೂ ದಾಖಲಾಗಿತ್ತು. ಇನ್ನು ಕುಟುಂಬಸ್ಥರು ಘಟನೆಯ ಕುರಿತಾಗಿ ಮಾತನಾಡಿದ್ದು, ತಾವು ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಲು ಆಪ್ ನಾಯಕ ಸೌರವ್ ಝಾ ಬಳಿ ತೆರಳಿದ್ದೆವು. ಆದರೆ ಸೌರವ್ ಈ ಪ್ರಕರಣ ಇತ್ಯರ್ಥಗೊಳಿಸಬೇಕಾದರೆ 25 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಇದಕ್ಕೆ ನಿರಾಕರಿಸಿದಾಗ ಕೋಪಗೊಂಡ ಅವರು ವಿಕಾಸ್‌ನನ್ನು ಥಳಿಸಲಾರಂಭಿಸಿದ್ದಾರೆಂದಿದ್ದಾರೆ.

ಇತ್ತ ಆಪ್ ಶಾಸಕ ಸೌರವ್ ಕೂಡಾ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ವಿಕಾಸ್ ಹಾಗೂ ಆತನ ಸಹಚರರು ಗೂಂಡಾಗಿರಿ ಮಾಡುತ್ತಾರೆ ಹಾಗೂ ಮಹಿಳೆಯರನ್ನು ಚುಡಾಯಿಸುತ್ತಾರೆ. ಇದರಿಂದ ಆಡು ಪಾಸಿನ ಜನರೆಲ್ಲರೂ ಬೇಸತ್ತಿದ್ದಾರೆ, ಹೀಗಾಗೇ ತಾನು ಆತನನ್ನು ಥಳಿಸಿದ್ದೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ತಪ್ಪು ಮಾಡಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ ಶಾಸಕ ಹಾಗೂ ಯುವಕ ಇಬ್ಬರೂ ತಮ್ಮ ತಮ್ಮ ದೂರುಗಳನ್ನು ಪೊಲೀಸರಿಗೆ ನೀಡಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಮಹಿಳೆಯರನ್ನು ಚುಡಾತಯಿಸಿರುವ ಆರೋಪದಡಿಯಲ್ಲಿ ವಿಕಾಸ್, ಆತನ ಸಹೋದರ ಮತ್ತು ಸಹಚರರನ್ನು ಬಂಧಿಸಿದ್ದಾರಾರೂ ಶಾಸಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Follow Us:
Download App:
  • android
  • ios