Asianet Suvarna News Asianet Suvarna News

ಮಗನ ಸಾಕ್ಷ್ಯದಿಂದ ತಂದೆಗೆ ಜೀವಾವಧಿ ಶಿಕ್ಷೆ

ಆರೋಪಿಯು ಮದ್ಯಪಾನ ಚಟಕ್ಕೆ ಬಲಿಯಾಗಿ ನಿತ್ಯವೂ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೆಂಡತಿಯ ಒಡವೆ ಯನ್ನು ಮಾರಿದ್ದ. ಪತಿಯ ಕಿರುಕುಳದಿಂದ ಬೇಸತ್ತ ಸುನೀತಾ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡಾಗಿದ್ದ ತನ್ನ ತಂದೆಯ ಮನೆಯ ಬಳಿಯೇ ಶೆಡ್‌ವೊಂದರಲ್ಲಿ ವಾಸವಿದ್ದರು.

Man gets life term for killing Wife at Mysore
Author
Bengaluru, First Published Sep 20, 2018, 5:57 PM IST

ಮೈಸೂರು(ಸೆ.20): ತನ್ನ ಕಣ್ಣೆದುರಿಗೆ ತಾಯಿಯನ್ನು ಕೊಲೆ ಮಾಡಿದ ತಂದೆಯ ವಿರುದ್ಧ ನಾಲ್ಕು ವರ್ಷದ ಮಗನೇ ಸಾಕ್ಷ್ಯ ನುಡಿದು, ಜೀವಾವಧಿ ಶಿಕ್ಷೆ ಯಾಗುವಂತೆ ಮಾಡಿದ ಘಟನೆ ಜರುಗಿದೆ. 

ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಮಹದೇವಪುರ ಗ್ರಾಮದ ನಾಗರಾಜು ಅ. ನಾಗ(32) ತನ್ನ ಪತ್ನಿಯನ್ನೇ ಕೊಲೆಗೈದು ಈಗ ಜೀವಾವಧಿ ಶಿಕ್ಷೆಗೆ ಒಳಗಾದವನು 

ಘಟನೆಯ ಹಿನ್ನೆಲೆ: ಮಹದೇವಪುರ ಗ್ರಾಮದ ನಿವಾಸಿ ನಾಗನಿಗೆ ಕೆ.ಆರ್. ನಗರ ತಾಲೂಕು ಹಂಪಾಪುರ ಗ್ರಾಮದ ನರಸಿಂಹೇಗೌಡ ಎಂಬವರ ಪುತ್ರಿ ಸುನೀತಾ ಎಂಬವರನ್ನು ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ವೇಳೆ 35 ಗ್ರಾಂ ಚಿನ್ನಾಭರಣ, 35 ಸಾವಿರ ವರದಕ್ಷಿಣೆ ನೀಡಲಾಗಿತ್ತು. ಆರೋಪಿಯು ಮದ್ಯಪಾನ ಚಟಕ್ಕೆ ಬಲಿಯಾಗಿ ನಿತ್ಯವೂ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೆಂಡತಿಯ ಒಡವೆ ಯನ್ನು ಮಾರಿದ್ದ. ಪತಿಯ ಕಿರುಕುಳದಿಂದ ಬೇಸತ್ತ ಸುನೀತಾ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡಾಗಿದ್ದ ತನ್ನ ತಂದೆಯ ಮನೆಯ ಬಳಿಯೇ ಶೆಡ್‌ವೊಂದರಲ್ಲಿ ವಾಸವಿದ್ದರು.

ಜೀವನೋಪಾಯಕ್ಕೆ ಮನೆಗೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದರು. ಆದರೆ ಅಲ್ಲಿಗೂ ಜಗಳ ತೆಗೆದು ಬಂದ ನಾಗ 2013 ಡಿ.12ರಂದು ಕುಡಿಯಲು ಹಣ ಕೇಳಲು ಬಂದಿದ್ದ. ಈ ಸಂದರ್ಭದಲ್ಲಿ ಮಲಗಿದ್ದ ಸುನಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಕೊಲೆಯನ್ನು ಮೃತ ಸುನಿತಾಳ ಮಗ ನಾಲ್ಕು ವರ್ಷದ ಪ್ರಮೋದ ನೋಡಿದ್ದ. ಈತ ನ್ಯಾಯಾಲಯದಲ್ಲಿ ನುಡಿದ ಸಾಕ್ಷಿ ಮಹತ್ವದ್ದೆಂದು ಪರಿಗಣಿಸಿದ ನಗರದ 5ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಜಿ. ಕುರುವತ್ತಿ ಅವರು ಈ ಶಿಕ್ಷೆ ಪ್ರಕಟಿಸಿದ್ದಾರೆ.

ಅಲ್ಲದೆ ಆರೋಪಿಯ ವಿಚಾರಣೆ ವೇಳೆ ಸುನಿತಾಳ ಕುತ್ತಿಗೆಗೆ ಬಿಗಿದಿದ್ದ ಹಗ್ಗ ಮತ್ತಿತರ ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಆರೋಪಿಗೆ ನ್ಯಾಯಾಧೀಶರಾದ ಜಿ.ಜಿ. ಕುರುವತ್ತಿ ಅವರು ಜೀವಾವಧಿ ಶಿಕ್ಷೆ ಮತ್ತು 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಮೃತಳ ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಧನ ಕೊಡುವಂತೆ  ಆದೇಶಿಸಿದ್ದಾರೆ. ಘಟನೆ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಕಲಂ 302, 201 ಪ್ರಕರಣ ಪ್ರಕರಣ ದಾಖಲಾಗಿ, ಆರೋಪಪಟ್ಟಿ ಸಲ್ಲಿಸಲಾಗಿತ್ತು. ಸರ್ಕಾರದ ಪರವಾಗಿ ಅಜಿತ್ ಕುಮಾರ್ ಡಿ. ಹಮಿಗಿ ವಾದ ಮಂಡಿಸಿದರು.

Follow Us:
Download App:
  • android
  • ios