ಬೆಂಗಳೂರು :  ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿನ ಬೋಗಿಯನ್ನೇರಿ ಆತ್ಮಹತ್ಯೆ ಯತ್ನಿಸಿದ ಅಪರಿಚಿತ ಯುವಕನೊಬ್ಬ, ಆಕಸ್ಮಿಕವಾಗಿ ಹೈಟೆನ್ಶನ್‌ ತಂತಿ ಸ್ಪರ್ಶಿಸಿ ಜೀವಂತವಾಗಿ ಸುಟ್ಟು ಹೋಗಿರುವ ದಾರುಣ ಘಟನೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಈ ಘಟನೆ ಸೋಮವಾರ ನಡೆದಿದ್ದು, ಆ ಭೀಕರ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಬಳಿಕ ಆ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಆ ಯುವಕ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗುತ್ತಾ ಏಕಾಏಕಿ ಬೋಗಿ ಹತ್ತಿದ್ದಾನೆ. ಈ ವೇಳೆ ಕೆಲವರು ಆತನನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯಾರ ಮಾತಿಗೂ ಆತ ಬೆಲೆ ಕೊಡಲಿಲ್ಲ. ಈ ಹಂತದಲ್ಲಿ ಆತ ಕೈ ಮೇಲೆತ್ತಿದ್ದಾಗ ಹೈಟೆನ್ಶನ್‌ ವೈರ್‌ ತಾಕಿ ವಿದ್ಯುತ್‌ ಪ್ರವಹಿಸಿದೆ. ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ದೇಹ ಆಗ್ನಿಗೆ ಆಹುತಿಯಾಗಿದೆ.

ಆ ವ್ಯಕ್ತಿಯ ಹೆಸರು-ವಿಳಾಸ ಗೊತ್ತಾಗಿಲ್ಲ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ವಿಡಿಯೋವನ್ನು ನೆರೆ ರಾಜ್ಯಗಳ ಪೊಲೀಸರಿಗೂ ರವಾನಿಸಲಾಗಿದ್ದು, ಗುರುತು ಪತ್ತೆಗೆ ನೆರವು ಕೋರಿದ್ದೇವೆ ಎಂದು ನಗರ ರೈಲ್ವೆ ಪೊಲೀಸರು ಹೇಳಿದರು. ಮಾ.30ರಂದು ಕಂಟನೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲೂ ಯುವಕನೊಬ್ಬ ಬೋಗಿ ಹತ್ತಿ ಹೈಟೆನ್ಶನ್‌ ವೈರ್‌ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.