ಎಲ್ಲಿಯಾದರಲ್ಲಿ ನೈಸರ್ಗಿಕ ವಿಕೋಪ ಅಥವಾ ಬೇರೆ ರೀತಿಯ ಅನಾಹುತಗಳು ಸಂಭವಿಸಿದಾಗ, ಅದಕ್ಕಾಗಿ ಮಾನವೀಯ ಹೃದಯಗಳು ಮಿಡಿಯುತ್ತವೆ. ಅಲ್ಲದೇ ಇಂಥ ಸಂದರ್ಭದಲ್ಲಿ ದೋಚುವ ಮನಸ್ಸುಗಳು ಇರುತ್ತವೆ. ಸಂತ್ರಸ್ತರಿಗೆಂದು ಹೇಗಾಯ್ತೋ ಹಾಗೆ ದೇಣಿಗೆ ನೀಡಿದರೆ, ತಲುಪ ಬೇಕಾದವರಿಗೆ ತಲುಪುವುದಿಲ್ಲವೆಂಬುವುದು ಗಮನದಲ್ಲಿರಲಿ.

ಬೆಂಗಳೂರು: ಮಾನವೀಯ ಕೃತ್ಯಗಳ ನಡುವೆಯೇ ಮನುಷ್ಯ ಅತ್ಯಂತ ಕ್ರೂರಿಯಾಗಿಯೂ ನಡೆದುಕೊಳ್ಳುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದಾನ ನೀಡಬೇಕೆಂದು ವಿಶಾಲ ಹೃದಯದಿಂದ ದೇಣಿಗೆ ನೀಡಿದರೆ, ಅದು ತಲುಪಬೇಕಾದವರಿಗೆ ತಲುಪದ ಸಾಧ್ಯತೆಗಳಿವೆ, ಗಮನದಲ್ಲಿರಲಿ.

ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ದೇಶವೇ ಮರುಗುತ್ತಿದೆ. ಈ ಬೆನ್ನಲ್ಲೇ ಸಂತ್ರಸ್ತರಿಗೆ ಕೈಲಾದಷ್ಟು ಸಹಕರಿಸಲು ಜನರು ತಾ ಮುಂದು ನಾ ಮುಂದು ಎನ್ನುತ್ತಿದ್ದಾರೆ. ಆದರೆ, ಸಂಘ, ಸಂಸ್ಥೆಗಳ ಹೆಸರಿನಲ್ಲಿ ಕೆಲವರು ಸುಳ್ಳು ಬ್ಯಾಂಕ್ ಖಾತೆ ಸೃಷ್ಟಿಸಿ, ವ್ಯಕ್ತಿಯೊಬ್ಬ 60 ಸಾವಿರ ರೂ. ದೋಚಿದ್ದಾನೆ.

ಕೊಡವ ಸಮಾಜಕ್ಕೆ ಸೇರಿದ ಬ್ಯಾಂಕ್ ಅಕೌಂಟ್ ಎಂದು ಹೇಳಿ, ಪ್ರವಾಹ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ನೀಡಬಹುದೆಂದು, ವಿಜಯ್ ಶರ್ಮಾ ಎಂದು ಕರೆ ನೀಡಿದ್ದ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ದಾರಿ ಹುಡುಕುತ್ತಿದ್ದ ಅನೇಕರು ಇದು ಸತ್ಯವೆಂದೇ ನಂಬಿ ಹಣ ಕಳುಹಿಸಿದ್ದಾರೆ. ಇದೀಗ ಕೊಡವ ಸಮಾಜ ಕೇಂದ್ರ ಅಪರಾಧ ಸಂಸ್ಥೆಗೆ ದೂರು ನೀಡಿದೆ. ಸಮಾಜದ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ದೂರು ದಾಖಲಿಸಿದೆ.

ಕೊಡಗು ಪ್ರವಾಹಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಡವ ಸಮಾಜಕ್ಕೆ ಸೇರಿದ್ದು ಎನ್ನಲಾದ ಬ್ಯಾಂಕ್ ಖಾತೆಯ ವಿವರಗಳು ಫೇಸ್‌ಬುಕ್, ಟ್ವೀಟರ್ ಹಾಗೂ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿದ್ದು, ಈ ಖಾತೆಯನ್ನು ನಿಷ್ಕಿರ್ಯಗೊಳಿಸಬೇಕೆಂದು ಸಮಾಜ ಬ್ಯಾಂಕ್‌ಗೂ ಕೋರಿಕೊಂಡಿದೆ.

ವಿಜಯ್ ಶರ್ಮಾ ಅವರನ್ನು ಮಂಡ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಯಶ್ ಹೆಸರಲ್ಲಿ ಅಕ್ರಮ ದೇಣಿಗೆ

ಸ್ಯಾಂಡಲ್‌ವುಡ್ ನಟ ಯಶ್ ಅವರಿಗೆ ಸೇರಿರುವ ಯಶೋಮಾರ್ಗದ ಹೆಸರಿನಲ್ಲಿಯೂ ಈಗಾಗಲೇ ಅನೇಕರ ದೇಣಿಗೆ ಸಂಗ್ರಹಿಸಿದ್ದಾರೆ. ಈ ಸಂಬಂಧವಾಗಿಯೂ ಯಶ್ ಅವರು ಸ್ಪಷ್ಟನೆ ನೀಡಿದ್ದು, ಅವರಿಗೆ ಸೇರಿರುವ ಸಂಸ್ಥೆ ಮೂಲಕ ಕೊಡಗು ಸಂತ್ರಸ್ತರಿಗೆ ಯಾವುದ ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.