Asianet Suvarna News Asianet Suvarna News

ಎಂಎಲ್'ಸಿ ಸೋಮಣ್ಣ ಎಂದು 94 ಲಕ್ಷ ರೂ. ವಂಚಿಸಿದ್ದ ಭೂಪ ;ತಾನು ಜೆಡಿಎಸ್ ಅಭ್ಯರ್ಥಿ ಎಂದು ಹಲವರಿಗೆ ಮೋಸ ಮಾಡಿದ್ದ

ಸಾಣೆಗೊರನಹಳ್ಳಿಯಲ್ಲಿ ಬಟ್ಟೆ ಮತ್ತು ಚಿನ್ನದ ಮಾರಾಟ ಮಳಿಗೆ ಹೊಂದಿರುವ ಸೋದರರನ್ನು ಭೇಟಿಯಾದ ಸೋಮಣ್ಣ, ನಾನು ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿದ್ದೇನೆ. ಅದಕ್ಕೆ ಸಾವಿರಾರು ಸೀರೆಗಳು ಹಾಗೂ ಚಿನ್ನದ ತಾಳಿ ಬೇಕಿದೆ ಎಂದು ಹೇಳಿದ್ದಾನೆ. ಈ ಮಾತು ನಂಬಿದ ಅವರು, ಆರೋಪಿಗೆ ತಲಾ 6 ಗ್ರಾಂ ತೂಕದ 187 ಚಿನ್ನದ ತಾಳಿಗಳು, 50 ಗ್ರಾಂನ ಐದು ಹಾಗೂ 30 ಗ್ರಾಂ ತೂಕದ 40 ಬಿಸ್ಕತ್‌ಗಳು ಸೇರಿ ಸುಮಾರು 94 ಲಕ್ಷ ಮೌಲ್ಯದ ಒಡವೆಯನ್ನು ರಾಜಸ್ತಾನದ ಜೈಪುರದಿಂದ ತರಿಸಿ ಕೊಟ್ಟಿದ್ದಾರೆ.

Man Cheat 94 Lakh in the name of MLC

ಬೆಂಗಳೂರು(ಏ.04): ಇತ್ತೀಚಿಗೆ ಚಿನ್ನದ ವ್ಯಾಪಾರಿಗಳಿಗೆ ತನ್ನನ್ನು ‘ವಿಧಾನಪರಿಷತ್ ಸದಸ್ಯ ಸೋಮಣ್ಣ’ ಎಂದು ಪರಿಚಯಿಸಿಕೊಂಡು, ಬಳಿಕ ಆ ವ್ಯಾಪಾರಿಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿತರಿಸಲು ಚಿನ್ನದ ತಾಳಿ ಬೇಕೆಂದು ಖರೀದಿಸಿ ಹಣ ಕೊಡದೆ ವಂಚಿಸಿದ್ದ ವೃತ್ತಿಪರ ಮೋಸಗಾರನೊಬ್ಬ ಬಸವೇಶ್ವರ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಹಕಾರ ನಗರದ ಗೋದ್ರೆಜ್ ಅಪಾರ್ಟ್'ಮೆಂಟ್ ನಿವಾಸಿ ಎಲ್.ಸೋಮಣ್ಣ ಹಾಗೂ ಆತನ ಸಹಚರ ಅಂಥೋಣಿ ಬಂಧಿತರಾಗಿದ್ದು, ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಉದ್ದೇಶ ದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದ್ದೇನೆ. ಈ ಸಮಾ ರಂಭದಲ್ಲಿ ನವ ದಂಪತಿಗೆ ವಿತರಿಸಲು ಚಿನ್ನದ ತಾಳಿ ಮತ್ತು ಬಿಸ್ಕತ್‌ಗಳು ಬೇಕು ಎಂದು ಒಡವೆ ಖರೀದಿಸಿ ನಂತರ ಹಣ ಕೊಡದೆ ಚಿನ್ನದ ವ್ಯಾಪಾರಿಗಳಿಗೆ ಆರೋಪಿ ವಂಚಿಸಿದ್ದಾನೆ.

ಹಾಗೆಯೇ ಕೆಲವರು ನಾಗರಿಕರಿಗೆ ಸರ್ಕಾರಿ ನಿವೇಶನ, ಉದ್ಯೋಗ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ಅವರಿಂದ ಹಣ ಕಿತ್ತು ನಾಮ ಹಾಕಿದ್ದಾನೆ. ಕೆಲ ದಿನಗಳ ಹಿಂದೆ ಆರೋಪಿಯಿಂದ ವಂಚನೆಗೊಳಗಾಗಿದ್ದ ಬಸವೇಶ್ವರ ನಗರದ ಸಾಣೆಗೊರನಹಳ್ಳಿಯ ಚಿನ್ನದ ವ್ಯಾಪಾರಿಗಳಾದ ಧೀರಜ್ ಮತ್ತು ಸೂರಜ್ ಅವರು, ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಕೀಯ ಸೋಗಿನ ವಂಚಕ: ಚಿತ್ರದುರ್ಗ ಜಿಲ್ಲೆಯ ಎಲ್.ಸೋಮಣ್ಣ, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಆರೋಪಿಯು ಸಾರ್ವಜನಿಕ ವಾಗಿ ತನ್ನನ್ನು ‘ಎಂಎಲ್‌ಸಿ ಸೋಮಣ್ಣ’ ಎಂದೇ ಪರಿಚಯಿಸಿಕೊಳ್ಳುತ್ತಿದ್ದ. ಆದರೆ ಆರೋಪಿ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಎರಡು ವರ್ಷಗಳ ಹಿಂದೆ ನಡೆದ ಚಿತ್ರದುರ್ಗ ಮತ್ತು ದಾವಣೆಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಎಂಎಲ್‌ಸಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆತ ಪರಾಜಿತನಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅದೇ ಚಿನ್ನದ ವ್ಯಾಪಾರಿಗಳನ್ನು ಪರಿಚಯಿಸಿ ಕೊಳ್ಳುತ್ತಿದ್ದ ಆತ, ಅವರಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಒಡವೆ ಖರೀದಿಸಿ ಬಳಿಕ ಹಣ ಕೊಡದೆ ವಂಚಿಸುತ್ತಿದ್ದ. ‘ನಾನು ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಮೈಸೂರು ಭಾಗದ ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ. ಹೀಗಾಗಿ  ಈ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಿದ್ಧತೆಗೆ ತನ್ನ ಟ್ರಸ್ಟ್ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಸಂಘಟಿಸಿದ್ದೇನೆ. ಈ ಸಮಾರಂಭದಲ್ಲಿ ನವ ದಂಪತಿಗಳಿಗೆ ವಿತರಿಸಲು ಚಿನ್ನದ ತಾಳಿ ಹಾಗೂ ಚಿನ್ನದ ಬಿಸ್ಕೆತ್‌ಗಳ ಅವಶ್ಯಕತೆ ಇದೆ ಎಂದು ನಾಜೂಕಿನ ಮಾತುಗಳಿಂದ ವ್ಯಾಪಾರಿಗಳನ್ನು ಮರಳು ಮಾಡಿ ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದೇ ರೀತಿ ಕೆಲ ದಿನಗಳ ಹಿಂದೆ ಸಾಣೆಗೊರನಹಳ್ಳಿಯ ಚಿನ್ನದ ವ್ಯಾಪಾರಿಗಳಾದ ಧೀರಜ್ ಹಾಗೂ ಸೂರಜ್ ಸೋದರರಿಗೆ ಆರೋಪಿ ಸ್ನೇಹವಾಗಿದೆ. ಸಾಣೆಗೊರನಹಳ್ಳಿಯಲ್ಲಿ ಬಟ್ಟೆ ಮತ್ತು ಚಿನ್ನದ ಮಾರಾಟ ಮಳಿಗೆ ಹೊಂದಿರುವ ಸೋದರರನ್ನು ಭೇಟಿಯಾದ ಸೋಮಣ್ಣ, ನಾನು ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿದ್ದೇನೆ. ಅದಕ್ಕೆ ಸಾವಿರಾರು ಸೀರೆಗಳು ಹಾಗೂ ಚಿನ್ನದ ತಾಳಿ ಬೇಕಿದೆ ಎಂದು ಹೇಳಿದ್ದಾನೆ. ಈ ಮಾತು ನಂಬಿದ ಅವರು, ಆರೋಪಿಗೆ ತಲಾ 6 ಗ್ರಾಂ ತೂಕದ 187 ಚಿನ್ನದ ತಾಳಿಗಳು, 50 ಗ್ರಾಂನ ಐದು ಹಾಗೂ 30 ಗ್ರಾಂ ತೂಕದ 40 ಬಿಸ್ಕತ್‌ಗಳು ಸೇರಿ ಸುಮಾರು 94 ಲಕ್ಷ ಮೌಲ್ಯದ ಒಡವೆಯನ್ನು ರಾಜಸ್ತಾನದ ಜೈಪುರದಿಂದ ತರಿಸಿ ಕೊಟ್ಟಿದ್ದಾರೆ.ಈ ವ್ಯಾಪಾರಿಗಳಿಗೆ ದೊಡ್ಡ ಮಳಿಗೆ ತೆರೆಯಲು ನನ್ನ ಟ್ರಸ್ಟ್ ಮೂಲಕ ಸಾಲ ಕೊಡಿಸುವುದಾಗಿ ಸಹ ಆರೋಪಿ ಭರವಸೆ ಕೊಟ್ಟಿದ್ದ. ಇದರಿಂದಲೇ ಸೋಮಣ್ಣನ ಮೇಲೆ ಅವರು ವಿಶ್ವಾಸಗೊಂಡಿದ್ದಾರೆ. ಆದರೆ ಒಡವೆ ಪಡೆದ ನಂತರ ಹಣ ಕೊಡದೆ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾನೆ. ಆಗ ಅನುಮಾನಗೊಂಡ ಸೋದರರು, ಬಸವೇಶ್ವರ ನಗರ ಠಾಣೆಗೆ ತೆರಳಿ ದೂರು ದಾಖಲಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮಣ್ಣ ವೃತ್ತಿಪರ ವಂಚಕನಾಗಿದ್ದು, ಆತನ ವಿರುದ್ಧ ವೈಯಾಲಿಕಾವಲ್, ಕೊಡಿಗೇಹಳ್ಳಿ, ಬಸವೇಶ್ವರ ನಗರ ಹಾಗೂ ಮೈಸೂರು ನಗರದ ನಜರಾಬಾದ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆತನ ಬಗ್ಗೆ ಜಾಗ್ರತರಾಗಿರುವಂತೆ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ವಂಚಿಸಿದ್ದಾನೆ ಎಂದು ಸೋಮಣ್ಣ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆರೋಪಿಯಿಂದ ಮೋಸಕ್ಕೊಳಗಾ ದ ಕೆಲವರು  ದೂರು  ನೀಡಿದರು.

ಆಗ ವಂಚನೆ ವಿಚಾರ ತಿಳಿದು ಕೆಂಡ ಮಂಡಲರಾದ ಕುಮಾರಸ್ವಾಮಿ ಅವರು, ಆತ ಮೊಳಕಾಲ್ಮೂರು ಪಕ್ಷದ ಹುರಿಯಾಳಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಈ ವಂಚನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕರೆ ಮಾಡಿ ಆರೋಪಿ ಮೇಲೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸುವಂತೆ ಕುಮಾರಸ್ವಾಮಿ ಸೂಚಿಸಿದರು ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios