ನವದೆಹಲಿ(ಸೆ.10): ಅಮೆರಿಕಕ್ಕೆ ಹೋಗುವ ತನ್ನ ಕನಸು ಈಡೇರಿಸಿಕೊಳ್ಳಲು ಗುಜರಾತ್ ಮೂಲದ ಯುವಕನೋರ್ವ ಅಡ್ಡದಾರಿ ಹಿಡಿದು ಇದೀಗ ಕಂಬಿ ಎಣಿಸುವ ಅನಿವಾರ್ಯತೆಗೆ ಸಿಲುಕಿರುವ ಘಟನೆ ನಡೆದಿದೆ.

ಗುಜರಾತ್‌ನ ಅಹಮದಾಬಾದ್ ಮೂಲದ ಜಯೇಶ್ ಪಟೇಲ್ ಎಂಬ 32 ವರ್ಷದ ವ್ಯಕ್ತಿ, ಅಮೆರಿಕಕ್ಕೆ ತೆರಳುವ ಉದ್ದೇಶದಿಂದ ಅರ್ಮಿಕ್ ಸಿಂಗ್ ಎಂದು ಹೆಸರು ಬದಲಿಸಿಕೊಂಡಿದ್ದಲ್ಲದೇ 81 ವರ್ಷದ ವ್ಯಕ್ತಿಯ ಹಾಗೆ ಮೇಕಪ್ ಮಾಡಿಕೊಂಡಿದ್ದ.

ಆದರೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CISF ತಪಾಸಣೆ ವೇಳೆ, ಜಯೇಶ್ ನಕಲಿ ದಾಡಿ ಅಂಟಿಸಿಕೊಂಡಿರುವುದು ಗೊತ್ತಾಗಿದೆ. ಅಲ್ಲದೇ ತಪಾಸಣೆಗಾಗಿ ವ್ಹೀಲ್ ಚೇರ್'ನಿಂದ ಮೇಲೆಳುವಾಗ ಮತ್ತು CISF ಸಿಬ್ಬಂದಿಯೊಂದಿಗೆ ಮಾತನಾಡುವಾಗ ಬೆದರಿದ ಪರಿಣಾಮ ಜಯೇಶ್ ಸಿಕ್ಕಿಬಿದ್ದಿದ್ದಾನೆ.

ಅಮೆರಿಕಕ್ಕೆ ತೆರಳು ಅರ್ಮಿಕ್ ಸಿಂಗ್ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ಜಯೇಶ್, ಇದೀಗ ಕಂಬಿ ಎಣಿಸಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.