ಪ್ರೀತಿಯ ಧೋರಣೆ ನನಗೆ ಇಷ್ಟ ಆಗಲಿಲ್ಲ. ತಂದೆ-ತಾಯಿ ಬಿಟ್ಟು ಪ್ರತ್ಯೇಕವಾಗಿ ನೆಲೆಸಲು ಸಾಧ್ಯವಿಲ್ಲ. ಹಾಗಾಗಿ ಬ್ರೈನ್‌ ಟ್ಯೂಮರ್‌ ನಾಟಕ ಮಾಡಿ ಮದುವೆ ನಿರಾಕರಿಸಿದೆ ಎಂದು ಆರೋಪಿ ರಂಗನಾಥ್‌ ವಿಚಾರಣೆ ವೇಳೆ ತಿಳಿಸಿದ್ದಾರೆ.

ಬೆಂಗಳೂರು: ಮದುವೆಗೆ ಒಂದು ವಾರ ಇರುವಾಗ ‘ಬ್ರೈನ್‌ ಟ್ಯೂಮರ್‌' ನಾಟಕ ಮಾಡಿ ವಿವಾಹ ನಿರಾಕರಿಸಿದ ವರಮಹಾಶಯ ಹಾಗೂ ಆತನ ಕುಟುಂಬದ ನಾಲ್ವರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗೌಡನಪಾಳ್ಯದ ವರ ರಂಗನಾಥ, ಈತನ ತಂದೆ ವರದರಾಜನ್‌, ತಾಯಿ ಜಯಮ್ಮ, ಸಬಂಧಿಕರಾದ ರವಿ ಮತ್ತು ಶ್ಯಾಮಲಾ ಎಂಬುವರು ಬಂಧಿತರು. ವರ ರಂಗನಾಥ್‌ ಖಾಸಗಿ ಕಂಪನಿಯ ಉದ್ಯೋಗಿ. ಮಂಜುನಾಥನಗರದ ವಧು ಪ್ರೀತಿ (ಹೆಸರು ಬದಲಿಸಲಾಗಿದೆ) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಎರಡೂ ಕುಟುಂಬಗಳ ಹಿರಿಯರು ಸಂಬಂಧ ಬೆಳೆಸಲು ಉತ್ಸುಕರಾಗಿದ್ದರು. ಅದರಂತೆ ವರ ಮತ್ತು ಮಧುವಿನ ಒಪ್ಪಿಗೆ ಮೇರೆಗೆ ನವೆಂಬರ್‌ 6ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಿದ್ದರು. 

ಇದೇ ವೇಳೆ ಫೆಬ್ರವರಿ 3ಕ್ಕೆ ಮದುವೆ ದಿನಾಂಕ ಗೊತ್ತು ಮಾಡಿದ್ದರು. ಹೀಗಾಗಿ ಮಧುವಿನ ಮನೆಯವರು ಕಲ್ಯಾಣ ಮಂಟಪ ಬುಕ್‌ ಮಾಡಿ, ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರಿಗೆ ಲಗ್ನಪತ್ರಿಕೆ ಹಂಚಿಕೆ ಮಾಡಿದ್ದರು. ಇದೀಗ ಮಧುಮಗ ಏಕಾಏಕಿ ಈ ಮದುವೆ ನಿರಾಕರಿಸಿದ್ದಾನೆ. ಈ ಸಂಬಂಧ ವಧು ಕುಟುಂಬದವರು ನೀಡಿದ ದೂರಿನ ಮೇರೆಗೆ ಮಧುಮಗ ಸೇರಿ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನನಗೆ ಬ್ರೈನ್‌ ಟ್ಯೂಮರ್‌: ಎರಡು ದಿನದ ಹಿಂದೆ ವರ ರಂಗನಾಥ, ಭಾವಿ ಪತ್ನಿ ಪ್ರೀತಿ ಮೊಬೈಲ್‌'ಗೆ ಕರೆ ಮಾಡಿ, ಶಾಕಿಂಗ್‌ ಸುದ್ದಿ ಹೇಳಿದ್ದಾನೆ. ‘ತನಗೆ ಬ್ರೈನ್‌ ಟ್ಯೂಮರ್‌ ಇರುವುದು ಈಗಷ್ಟೇ ಗೊತ್ತಾಯಿತು. ಹೀಗಾಗಿ ಈ ಮದುವೆ ಸಾಧ್ಯವಿಲ್ಲ. ನನ್ನನ್ನು ಮರೆತು ಬಿಡು' ಎಂದು ತಿಳಿಸಿದ್ದಾನೆ. ಪ್ರೀತಿ ಈ ಬಗ್ಗೆ ಅನುಮಾನಗೊಂಡು ‘ಈಗ ಎಲ್ಲಿದ್ದೀರಾ ಹೇಳಿ. ನಾನು ಅಲ್ಲಿಗೆ ಬರುತ್ತೇನೆ' ಎಂದು ಉತ್ತರಿಸಿದ್ದಳು. ಆಗ ‘ಆಸ್ಪತ್ರೆಯಿಂದ ಫೋನ್‌ ಮಾಡುತ್ತಿದ್ದೇನೆ. ನನ್ನ ಸ್ನೇಹಿತನೇ ಡಾಕ್ಟರ್‌. ಈ ವಿಚಾರ ಯಾರಿಗೂ ಹೇಳ ಬೇಡ ಎಂದಿದ್ದಾನೆ. ಹೀಗಾಗಿ ನೀನು ಆಸ್ಪತ್ರೆಗೆ ಬರುವುದು ಬೇಡ. ನನ್ನನ್ನು ಮರೆತು ಬಿಡು' ಎಂದು ರಂಗನಾಥ ಕರೆ ಸ್ಥಗಿತಗೊಳಿಸಿದ್ದಾನೆ.

ಪೋಷಕರ ನಿರಾಕರಣೆ: ಮದುವೆಗೆ ಒಂದು ವಾರ ಇರುವಾಗ ರಂಗನಾಥ್‌ ಬ್ರೈನ್‌ ಟ್ಯೂಮರ್‌ ಕಾಯಿಲೆ ಮುಂದಿಟ್ಟು ವಿವಾಹ ಬೇಡ ಎನ್ನುತ್ತಿರುವ ಮಾತು ಕೇಳಿದ ಪ್ರೀತಿಗೆ ಇದು ನಾಟಕ ಎನ್ನುವುದು ಗೊತ್ತಾಗಿದೆ. ಈ ವಿಚಾರವನ್ನು ತಮ್ಮ ಪೋಷಕರಿಗೆ ಹೇಳಿದ್ದಾರೆ. ಪ್ರೀತಿ ಪೋಷಕರು ರಂಗನಾಥ ಮತ್ತು ಆತನ ಪೋಷಕರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ಅವರು ಕೂಡ ಮಗನಿಗೆ ಇಷ್ಟವಿಲ್ಲದ ಮದುವೆ ತಮಗೂ ಇಷ್ಟವಿಲ್ಲ ಸ್ಪಷ್ಟಪಡಿದ್ದಾರೆ. ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದ ಪ್ರೀತಿಯ ಪೋಷಕರು ಮದುವೆ ನಿಶ್ಚಯ ಸಮಯದಲ್ಲಿ ಮಾತುಕತೆಗೆ ಕುಳಿತ್ತಿದ್ದ ಕೆಲ ಹಿರಿಯರ ಗಮನಕ್ಕೆ ಈ ವಿಚಾರ ತಂದಿದ್ದಾರೆ. ಬಳಿಕ ರಂಗನಾಥ ಮತ್ತು ಆತನ ಪೋಷಕರು ಮದುವೆ ಬೇಡವೇ ಬೇಡ ಎಂದು ಕಡ್ಡಿ ತುಂಡಾದಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಹಂತದಲ್ಲಿ ಬೇರೆ ದಾರಿ ಕಾಣದೆ ಪ್ರೀತಿಯ ಮನೆಯವರು ರಂಗನಾಥ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಬೇರೆ ಮನೆ ಮಾಡು ಎಂದಿದ್ದಕ್ಕೆ ಹೀಗೆ ಮಾಡಿದೆ:
‘ನಿಮ್ಮ ತಿಂಗಳ ಸಂಬಳ ಎಷ್ಟು? ಮದುವೆ ಬಳಿಕ ಪ್ರತ್ಯೇಕ ಮನೆ ಮಾಡಬೇಕು' ಎಂದು ಮಾತನಾಡುವಾಗ ಪ್ರೀತಿ ಹೇಳಿದ್ದಳು. ಪ್ರೀತಿಯ ಈ ಧೋರಣೆ ನನಗೆ ಇಷ್ಟ ಆಗಲಿಲ್ಲ. ತಂದೆ-ತಾಯಿ ಬಿಟ್ಟು ಪ್ರತ್ಯೇಕವಾಗಿ ನೆಲೆಸಲು ಸಾಧ್ಯವಿಲ್ಲ. ಹಾಗಾಗಿ ಬ್ರೈನ್‌ ಟ್ಯೂಮರ್‌ ನಾಟಕ ಮಾಡಿ ಮದುವೆ ನಿರಾಕರಿಸಿದೆ. ನಾನು ಜೈಲಿಗೆ ಹೋದರೂ ಸರಿಯೇ ಈ ಮದುವೆ ಬೇಡ ಎಂದು ಆರೋಪಿ ರಂಗನಾಥ್‌ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

(ಕನ್ನಡಪ್ರಭ ವಾರ್ತೆ)
epaper.kannadaprabha.in