ಕೋಲ್ಕತಾ: ಟಿಎಂಸಿಯ 40 ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ ಬೆನ್ನಲ್ಲೇ, ನಾಚಿಕೆಯಿಲ್ಲದೆ ಸಾರ್ವಜನಿಕವಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನಾಮಪತ್ರ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಹೂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಅವರು, ‘ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ಬಿಜೆಪಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೋದಿ ಹೇಳಿದ್ದರು.

ಈ ಮೂಲಕ ಅವರು ನಾಚಿಕೆಯಿಲ್ಲದೆ, ಹೇಗೆ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದನ್ನು ತೋರಿಸುತ್ತದೆ. ದೇಗುಲಗಳ ನಗರಿ ವಾರಾಣಸಿಯಿಂದ ಸ್ಪರ್ಧೆ ಮಾಡಿರುವ ಮೋದಿ ಅವರ ನಾಮಪತ್ರ ರದ್ದುಗೊಳಿಸಬೇಕು. ಅಲ್ಲದೆ, ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಮೋದಿ ಅವರಿಗಿಲ್ಲ,’ ಎಂದು ಗುಡುಗಿದರು.

ಅಲ್ಲದೆ, ಸಾಧ್ಯವಾದಲ್ಲಿ ಒಬ್ಬರೇ ಒಬ್ಬ ಶಾಸಕರನ್ನು ಸೆಳೆದು ತೋರಿಸಿ ಎಂದು ಸವಾಲ್‌ ಹಾಕಿದ್ದಾರೆ.