ಮುಂಬೈ: ಜರ್ಮನಿ ಮೇಲೆ ಸರ್ವಾಧಿಕಾರ ಹೇರಿದ್ದ ಹಿಟ್ಲರ್‌ ರೀತಿಯಲ್ಲೇ ಭಾರತದ ಮೇಲೆ ಸರ್ವಾಧಿಕಾರ ಹೇರಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. 

ಮುಂಬೈನಲ್ಲಿ ಕಾಂಗ್ರೆಸ್‌ ಘಟಕ ಹಮ್ಮಿಕೊಂಡಿದ್ದ ‘ಸಂವಿಧಾನ ಉಳಿಸಿ ಕಾರ್ಯಕ್ರಮ’ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತಾವಧಿಯಲ್ಲಿ ದೇಶವು ಹಾಳಾಗುತ್ತಿದೆ. ಆದರೆ, ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಿದ ರೀತಿಯಲ್ಲಿ ಸಂವಿಧಾನವನ್ನು ನಾಶ ಮಾಡಲು ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಕಾಶ ನೀಡುವುದಿಲ್ಲ,’ ಎಂದು ಗುಡುಗಿದರು. 

ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರಕ್ಕೆ ನಾಲ್ಕು ಹೆಜ್ಜೆ ಇಡಲು ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಕಳೆದ 70 ವರ್ಷಗಳಿಂದ ನಾವೇನು ಮಾಡಿದ್ದೇವೆ ಎಂದು ಕಾಂಗ್ರೆಸ್‌ ಕಡೆ ಬೊಟ್ಟು ಮಾಡುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ಖರ್ಗೆ ಹೇಳಿದರು.