ನವದೆಹಲಿ: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ರಾಹುಲ್ ಗಾಂಧಿ ನಡೆಯಿಂದ ಚಿಂತಾಕ್ರಾಂತರಾಗಿರುವ ಹಿರಿಯ ಕಾಂಗ್ರೆಸ್ಸಿಗರು ಸರಣಿ ಸಭೆಗಳನ್ನು ನಡೆಸಿ 3 ಆಯ್ಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿ ದ್ದಾರೆ. ಈ ಪೈಕಿ ನೆಹರು- ಗಾಂಧಿ ಕುಟುಂಬದಿಂದ ಹೊರಗಿನ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವವೂ ಇದ್ದು, ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ, ಲೋಕಸಭೆಯಲ್ಲಿನ ಕಾಂಗ್ರೆಸ್ ಮಾಜಿ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ. 

"

ರಾಜೀನಾಮೆಗೆ ರಾಹುಲ್ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಕಾಂಗ್ರೆಸ್ ನಲ್ಲಿ ಡಜನ್‌ಗಟ್ಟಲೆ ಸಭೆಗಳು ನಡೆದಿವೆ. ಪುಟ್ಟ ಪುಟ್ಟ ಗುಂಪುಗಳಾಗಿ ಅಥವಾ ಕೆಲವು ನಾಯಕರು ಮುಖಾಮುಖಿಯಾಗಿ ಈ ಸಭೆಗಳನ್ನು ನಡೆಸಿದ್ದಾರೆ. ಮನಮೋಹನ ಸಿಂಗ್, ಎ.ಕೆ. ಆ್ಯಂಟನಿ, ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಆನಂದ ಶರ್ಮಾ, ಪೃಥ್ವಿರಾಜ್ ಚವಾಣ್ ಹಾಗೂ ಪ್ರಿಯಾಂಕಾ ಗಾಂಧಿ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ನಾಯಕರು ಕಂಡುಕೊಂಡಿರುವ 3 ಆಯ್ಕೆಗಳು ಈ ರೀತಿ ಇವೆ.

1 ರಾಜೀನಾಮೆ ವಾಪಸ್ ಪಡೆದು ಹುದ್ದೆಯಲ್ಲಿ ಮುಂದುವರಿಯುವಂತೆ ರಾಹುಲ್ ಗಾಂಧಿ ಅವರ ಮನವೊಲಿಸುವುದು.

2 ರಾಹುಲ್ ಒಪ್ಪದೇ ಇದ್ದರೆ, ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು. ಆದರೆ 2 ವರ್ಷವಾದ ಬಳಿಕ ರಾಹುಲ್ ಮರಳಿ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಷರತ್ತು ವಿಧಿಸುವುದು.

3 ರಾಜೀನಾಮೆಯನ್ನೂ ಹಿಂಪಡೆಯದೇ, ಸೋನಿಯಾ ಅಧ್ಯಕ್ಷರಾಗುವುದಕ್ಕೂ ರಾಹುಲ್ ಒಪ್ಪಿಗೆ ನೀಡದೇ ಇದ್ದರೇ ನೆಹರು- ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವುದು. ಈ ಮೂರನೇ ಆಯ್ಕೆಯಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಹಾರಾಷ್ಟ್ರದ ಪೃಥ್ವಿರಾಜ್ ಚವಾಣ್ ಮತ್ತು ಕೇರಳದ ಕೆಲವೊಂದು ನಾಯಕರ ಹೆಸರು ಪರಿಗಣನೆಯಲ್ಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಸೋನಿಯಾಗೆ ಇಬ್ಬರು ಕಾರ್ಯಾಧ್ಯಕ್ಷ: ರಾಹುಲ್ ರಾಜೀನಾಮೆ ಹಿಂಪಡೆಯುವುದೇ ಅತ್ಯುತ್ತಮ ಆಯ್ಕೆಯಾಗಿದೆ. ಅದಾದಲ್ಲಿ ಪಕ್ಷದಲ್ಲಿನ ಅನಿಶ್ಚಿತತೆಯೇ ಮುಗಿಯಲಿದೆ ಎಂಬ ವಾದವನ್ನು ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ರಾಹುಲ್ ಮಣಿಯದೇ ಇದ್ದಲ್ಲಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಎರಡನೇ ಆಯ್ಕೆ ಇದೆ. ಸೋನಿಯಾ ಅವರು ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಸ್ವೀಕಾರಾರ್ಹ ವ್ಯಕ್ತಿಯಾಗಿದ್ದಾರೆ.

ಕಾಂಗ್ರೆಸ್ಸಿನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಸೋನಿಯಾ ಅವರಿಗೆ ಇಬ್ಬರನ್ನು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಕುರಿತಂತೆಯೂ ಚರ್ಚೆ ಆಗಿದೆ. ಇದಲ್ಲದೇ 8 ರಿಂದ 10 ಸದಸ್ಯರನ್ನು ಒಳಗೊಂಡ ಸಂಸದೀಯ ಮಂಡಳಿಯನ್ನು ರಚನೆ ಮಾಡುವ  ಪ್ರಸ್ತಾಪವೂ ಇದೆ. ಇದು ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಸಿಪಿಎಂನ ಪಾಲಿಟ್‌ಬ್ಯೂರೋ ರೀತಿಯಲ್ಲೇ ಕಾರ್ಯನಿರ್ವ
ಹಿಸುವ ಸಂಸದೀಯ ಮಂಡಳಿ ಪಿ.ವಿ. ನರಸಿಂಹರಾವ್ ಅವರಿದ್ದಾಗ ಇತ್ತು.