ಹೈಕೋರ್ಟ್ ಏಕಸದಸ್ಯ ಪೀಠ, ಲೀಷಾಗೆ ಮೂರು ತಿಂಗಳಲ್ಲಿ ಉದ್ಯೋಗ ಕಲ್ಪಿಸುವಂತೆ 2016 ಅಕ್ಟೋಬರ್ 17ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಹೈಕೋರ್ಟ್ ಆದೇಶ ಹೊರಡಿಸಿ ಎಂಟು ತಿಂಗಳ ಕಳೆದರೂ ಉದ್ಯೋಗ ನೀಡದ ಕಾರಣ ಲೀಷಾ ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಹೈಕೋರ್ಟ್‌'ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಅಂಗವಿಕಲೆಯಾಗಿರುವ ಲೀಷಾಗೆ ರಾಜ್ಯ ಸರ್ಕಾರವು ಪ್ರಥಮ ದರ್ಜೆ ಸಹಾಯಕಿ (ಎಫ್ಡಿಎ) ಉದ್ಯೋಗ ನೀಡಿದೆ. ಇದರೊಂದಿಗೆ ರಾಜ್ಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಭಯೋತ್ಪಾದನೆ ಕೃತ್ಯದ ಸಂತ್ರಸ್ತೆಯೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿದಂತಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲೀಷಾರನ್ನು ರಾಜ್ಯ ಅಗ್ನಿ ಶಾಮಕ ಮತ್ತು ಗೃಹಕ ಇಲಾಖೆಯಲ್ಲಿ ಎಫ್ಡಿಎ ಉದ್ಯೋಗಕ್ಕೆ ನೇಮಕ ಮಾಡಿದೆ. ಈ ಕುರಿತು ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದ್ದು, ಉದ್ಯೋಗ ನೀಡಿದ ವಿಚಾರವನ್ನು ಅಧಿಕಾರಿಗಳು ಲೀಷಾಗೆ ತಿಳಿಸಿದ್ದಾರೆ.
2013ರ ಏಪ್ರಿಲ್ 17ರಂದು ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ ವಿದ್ಯಾರ್ಥಿ ಲೀಷಾ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯ ಕಾಲಿಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿತ್ತು. ಕಡೆಗೆ ಶೇ.50ರಿಂದ 70ರಷ್ಟು ಅಂಗವೈಕಲ್ಯಕ್ಕೆ ಗುರಿಯಾದರು. ಇದರಿಂದ ತನ್ನನ್ನು ಭಯೋತ್ಪಾದನೆ ಕೃತ್ಯದ ಸಂತ್ರಸ್ತೆಯಾಗಿ ಪರಿಗಣಿಸಿ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಕೋರಿ ಲೀಷಾ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರಿಂದ ಪ್ರಯೋಜವಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ, ಲೀಷಾಗೆ ಮೂರು ತಿಂಗಳಲ್ಲಿ ಉದ್ಯೋಗ ಕಲ್ಪಿಸುವಂತೆ 2016 ಅಕ್ಟೋಬರ್ 17ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಹೈಕೋರ್ಟ್ ಆದೇಶ ಹೊರಡಿಸಿ ಎಂಟು ತಿಂಗಳ ಕಳೆದರೂ ಉದ್ಯೋಗ ನೀಡದ ಕಾರಣ ಲೀಷಾ ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಹೈಕೋರ್ಟ್'ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಲೀಷಾಗೆ ಕೂಡಲೇ ಉದ್ಯೋಗ ನೀಡುವಂತೆ ನಿರ್ದೇಶಿಸುವಂತೆ ಜೂನ್ 6ರಂದು ತಾಕೀತು ಮಾಡಿತ್ತು. ಅದರಂತೆ ಸರ್ಕಾರ ಇದೀಗ ಲೀಷಾಗೆ ಎಫ್ಡಿಎ ಉದ್ಯೋಗ ಕಲ್ಪಿಸಲಾಗಿದೆ. ನ್ಯಾಯಾಂಗ ನಿಂದನೆ ಅರ್ಜಿಯು ಆಗಸ್ಟ್ 1ರಂದು ಮತ್ತೆ ವಿಚಾರಣೆಗೆ ಬರಲಿದ್ದು, ಅಂದು ನೇಮಕಾತಿ ಆದೇಶ ಪತ್ರವನ್ನು ಸರ್ಕಾರವು ಹೈಕೋರ್ಟ್ಗೆ ಸಲ್ಲಿಸಲಿದೆ.
ಕನ್ನಡಪ್ರಭ ವಾರ್ತೆ
epaperkannadaprabha.com
