ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಮೈಸೂರಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಾರೆಂಬ ಸುದ್ದಿಯನ್ನು ಅವರ ಪುತ್ರ, ಫರ್ಹತಾಬಾದ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಿತೇಶ್‌ ಗುತ್ತೇದಾರ್‌ ತಳ್ಳಿಹಾಕಿದ್ದಾರೆ. ಅದೆಲ್ಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿ : ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಮೈಸೂರಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಾರೆಂಬ ಸುದ್ದಿಯನ್ನು ಅವರ ಪುತ್ರ, ಫರ್ಹತಾಬಾದ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಿತೇಶ್‌ ಗುತ್ತೇದಾರ್‌ ತಳ್ಳಿಹಾಕಿದ್ದಾರೆ. ಅದೆಲ್ಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ತಂದೆ ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರುವುದಾಗಿ ತಿಳಿಸಿದ ವಿಚಾರವಾಗಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಿತೇಶ್‌, ಕಾಂಗ್ರೆಸ್‌ ಪಕ್ಷದಲ್ಲಿ ನಮ್ಮ ತಂದೆಯವರಿಗೆ ಅನ್ಯಾಯವಾಗಿದ್ದು ನಿಜ. ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿಯ ಶಾಸಕರಾಗಿದ್ದರೂ ಅವರ ಗೌರವಕ್ಕೆ ತಕ್ಕುದಾದ ಸ್ಥಾನಮಾನ ನೀಡುವಲ್ಲಿ ನಾಯಕರು ವಿಫಲವಾಗಿದ್ದಾರೆ. ಹೀಗಾಗಿ ಪಕ್ಷ ತೊರೆಯುವುದಾಗಿ ತಂದೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜೊತೆಗೂ ಚರ್ಚೆ ಮಾಡಿದ್ದಾರೆ. ಆದರೆ ಮೈಸೂರಿನಲ್ಲಿ ನಡೆಯುವ ಅಮಿತ್‌ ಶಾ ಸಮ್ಮುಖದಲ್ಲಿ ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎನ್ನುವುದು ಸುಳ್ಳು ಎಂದರು.

ಇಂದು ಸಭೆ: ಮಾಲೀಕಯ್ಯ ಗುತ್ತೇದಾರ್‌ ಅವರು ಶನಿವಾರ ಅಫಜಲ್ಪುರ ತಾಲೂಕಿನ ಸ್ಟೇಷನ್‌ ಗಾಣಗಾಪುರದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದು, ಆ ಬಳಿಕ ಮುಂದಿನ ರಾಜಕೀಯ ನಡೆ ಏನೆಂಬುದನ್ನು ತಿಳಿಸಲಿದ್ದಾರೆ. ಅಫಜಲ್ಪುರ ತಾಲೂಕಿನಲ್ಲಿ ಪಕ್ಷಗಳಿಗಿಂತ ವ್ಯಕ್ತಿಯೇ ಮುಖ್ಯ. ತಾಲೂಕಿನ ಜನರ ಮನಸ್ಸಿನಲ್ಲಿ ಮಾಲೀಕಯ್ಯ ಗುತ್ತೇದಾರ ಅವರೇ ಇದ್ದಾರೆ. ಹೀಗಾಗಿ ಅವರು ಯಾವ ಪಕ್ಷದಲ್ಲಿ ಚುನಾವಣೆಗೆ ನಿಂತರೂ ಆಯ್ಕೆಯಾಗಲಿದ್ದಾರೆ ಎಂದು ರಿತೇಶ್‌ ತಿಳಿಸಿದರು.