ನವದೆಹಲಿ(ಆ.01): ಮಾಲ್ದೀವ್ಸ್​ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಹತ್ಯೆಗೆ ಸಂಚು ರೂಪಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಮಾಲ್ಡೀವ್ಸ್’ನಲ್ಲಿ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ್ದ ಅಹ್ಮದ್ ಅದೀಬ್’ನನ್ನು ತಮಿಳುನಾಡಿನ ತೂತುಕುಡಿಯಲ್ಲಿ ಬಂದರು ಅಧಿಕಾರಿಗಳು ಬಂಧಿಸಿದ್ದಾರೆ. 

ಇನ್ನು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಹ್ಮದ್ ಅದೀಬ್’ನನ್ನು ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಜುಲೈ 11ರಂದು ವಿರ್ಗೋ ಎಂಬ ದೋಣಿ ಮಾಲ್ಡೀವ್ಸ್’ಗೆ ಸರಕುಗಳನ್ನು ತೆಗೆದುಕೊಂಡು ಹೋಗಿತ್ತು. ಅಲ್ಲಿಂದ ಜುಲೈ 28ರಂದು ಮರಳುವಾಗ ಅಹ್ಮದ್ ಅದೀಬ್ ತನಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದ.

ಗುರುವಾರ ತೂತುಕುಡಿ ಹಳೆಯ ಬಂದರಿಗೆ ದೋಣಿ ತಲುಪಿದ್ದು ಈ ವೇಳೆ ಸಿಬ್ಬಂದಿ ಬಂದರು ಅಧಿಕಾರಿಗಳಿಗೆ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ತಮ್ಮ ದೋಣಿಯಲ್ಲಿ ಪ್ರಯಾಣ ಬೆಳೆಸಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂದರು ಅಧಿಕಾರಿಗಳು ಅದೀಬ್’ನನ್ನು ಬಂಧಿಸಿದ್ದಾರೆ.

ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.