ಶ್ರೀನಗರ[ಮೇ.06]: 18 ವರ್ಷದ ಯುವತಿಯೊಬ್ಬಳ ಜೊತೆ ಹೋಟೆಲ್‌ ಪ್ರವೇಶಿಸುವಾಗ ಸಿಕ್ಕಿಬಿದ್ದ ಮೇಜರ್‌ ಲೀಟುಲ್‌ ಗೊಗೋಯ್‌ಗೆ ಸೇವಾ ಹಿರಿತನದ ಬಡ್ತಿ ಕಡಿತ ಮಾಡಲಾಗಿದೆ. ಜೊತೆಗೆ ಕಾಶ್ಮೀರದಿಂದ ಹೊರ ಹೋಗುವ ಶಿಕ್ಷೆ ವಿಧಿಸಲಾಗಿದೆ.

ತಾನು ಕಾರ್ಯನಿರ್ವಹಿಸುತ್ತಿರುವ ಪ್ರದೇಶದಿಂದ ಹೊರಗೆ ಹೋಗಿದ್ದು ಮತ್ತು ಸೇನಾ ನಿಯಮದ ವಿರುದ್ಧವಾಗಿ ಸ್ಥಳೀಯ ಯುವತಿಯೊಬ್ಬಳ ಜೊತೆ ಒಡನಾಟ ಇಟ್ಟುಕೊಂಡ ಕಾರಣಕ್ಕೆ ಗೊಗೋಯ್‌ ಮತ್ತು ಅವರ ವಾಹನ ಚಾಲಕ ಸಮೀರ್‌ ಮುಲ್ಲಾ ತಪ್ಪಿತಸ್ಥರು ಎಂದು ಸೇನಾ ಕೋರ್ಟ್‌ವೊಂದು ತೀರ್ಪು ನೀಡಿದೆ.

2017ರಲ್ಲಿ ಪ್ರಾದೇಶಿಕ ಸೇನೆಗೆ ಸೇರ್ಪಡೆಯಾಗಿದ್ದ ಮುಲ್ಲಾ ಬಳಿಕ ರಾಷ್ಟ್ರೀಯ ರೈಫಲ್ಸ್‌ಗೆ ಸೇರ್ಪಡೆಯಾಗಿದ್ದರು. ಹೇಳದೇ ಕೇಳದೇ ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಅವರಿಗೂ ಶಿಕ್ಷೆ ವಿಧಿಸಲಾಗಿದೆ.

ಕಳೆದ ವರ್ಷದ ಮೇ 23ರಂದು 18 ವರ್ಷದ ಯುವತಿಯೊಬ್ಬಳ ಜೊತೆ ಹೋಟೆಲ್‌ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಗೊಗೋಯ್‌ ಅವರನ್ನು ವಶಕ್ಕೆ ಪಡೆಯಲಾಗಿತ್ತು. 2017ರಲ್ಲಿ ಕಲ್ಲು ತೂರಾಟಗಾರರಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬನನ್ನು ಜೀಪಿಗೆ ಕಟ್ಟಿಮೆರವಣಿಗೆ ನಡೆಸಿದ ಕಾರಣಕ್ಕೂ ಗೊಗೊಯ್‌ ವಿವಾದ ಸೃಷ್ಟಿಸಿದ್ದರು.