ನವದೆಹಲಿ[ಆ.17]: ಸೇನೆಯಲ್ಲಿ ಭಾರೀ ಸದ್ದು ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. 2016ರಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಕ್ಯಾಪ್ಟನ್‌ ಶ್ರೇಣಿಯ ಅಧಿಕಾರಿ ಲೈಂಗಿಕ ಕಿರುಳವೆಸಗಿದ್ದರು ಎಂದು ಆರೋಪಿಸಿ ಮಹಿಳಾ ಅಧಿಕಾರಿಯೊಬ್ಬರು ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ, ಮೇಜರ್‌ ಜನರಲ್‌ ಆರ್‌.ಎಸ್‌ ಜಸ್ವಾಲ್‌ ಅವರನ್ನು ಶುಕ್ರವಾರ ಸೇವೆಯಿಂದ ವಜಾಗೊಳಿಸಲಾಗಿದೆ.

ಸೇನಾ ನಿಯಮಾವಳಿಯ ಐಪಿಸಿ ಸೆಕ್ಷನ್‌ 354ಎ ಹಾಗೂ 45 ಅಡಿಯಲ್ಲಿ ಜಸ್ವಾಲ್‌ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಸೇವೆಯಿಂದ ವಜಾಗೊಳಿಸಾಗಿದೆ. ಜನರಲ್‌ ಕೋರ್ಟ್‌ ಮಾರ್ಷಲ್‌ನ ಈ ತೀರ್ಪನ್ನು ಮುಖ್ಯಸ್ಥ ಜನರಲ್‌ ಬಿ.ಪಿ ರಾವತ್‌ ಅನುಮೋದಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಸ್ಸಾಂ ರೈಫಲ್ಸ್‌ನ ಇನ್ಸ್‌ಪೆಕ್ಟರ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಸ್ವಾಲ್‌ ಮೇಲೆ ‘ಮೀ ಟೂ’ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಹಿಳಾ ಅಧಿಕಾರಿ ದೂರು ದಾಖಸಿದ್ದರು.

ಆರು ಜನ ಸೇನಾಧಿಕಾರಿಗಳಿದ್ದ ಜನರಲ್‌ ಕೋರ್ಟ್‌ ಮಾರ್ಷಲ್‌ ಪ್ರಕರಣ ಸಂಬಂಧ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಜಸ್ವಾಲ… ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ಜನರಲ್ ರಾವತ್‌ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ಸೇನೆಯೊಳಗಿನ ಬಣ ಸಂಘರ್ಷದಿಂದಾಗಿ ನನ್ನನ್ನು ಈ ಸಂಚಿನಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದರು.