ತೆಲಂಗಾಣ[ಡಿ.11]: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಮಂಗಳವಾರ ಪ್ರಕಟವಾಗಲಿದೆ. ಈ ಚುನಾವಣಾ ಫಲಿತಾಂಶವು ಆಯಾ ರಾಜ್ಯಗಳಲ್ಲಿ ನೂತನ ಸರ್ಕಾರವನ್ನು ಸ್ಥಾಪಿಸಲು ಮಾತ್ರ ಸೀಮಿತವಾಗಿರದೆ ರಾಜಕೀಯ ವಲಯದಲ್ಲೂ ಭಾರೀ ಬದಲಾವಣೆ ತರುವ ನಿರೀಕ್ಷೆ ಇದೆ. ಸದ್ಯ ಈ ಫಲಿತಾಂಶಕ್ಕೂ ಹಿಂದಿನ ದಿನ ಅಂದರೆ ಸೋಮವಾರ ತೆಲಂಗಾಣದಲ್ಲಿ ಮಹತ್ವದ ಬೆಳವಣಿಗೆಗಳಾಗಿದ್ದು, ಎಐಎಂಐಎಂ ಮುಖಂಡ ಮತ್ತು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ತಾನು ತೆಲಂಗಾಣ ರಾಷ್ಟ್ರ ಸಮಿತಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿಂದಿನಿಂದಲೂ ಕೆಸಿಆರ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಓವೈಸಿ, ಚುನಾವಣೆಯ ಪ್ರಚಾರದ ಸಮಯದಲ್ಲೂ ಟಿಆರ್ ಎಸ್ ವಿರುದ್ಧ ಹೆಚ್ಚು ಮಾತುಗಳನ್ನಾಡಿರಲಿಲ್ಲ. ಈಗಾಗಲೇ ಪ್ರಕಟವಗಿರುವ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ತೆಲಂಗಾಣದಲ್ಲಿ ಟಿಆರ್ ಎಸ್ ಗೆಲುವು ಸಾಧಿಸುವುದು ಖಚಿತ ಎಂದಿವೆ. ರಾಜಕೀಯ ತಜ್ಞರ ಲೆಕ್ಕಾಚಾರವೂ ಅದೇ ಆಗಿದೆ. ಹೀಗಿದ್ದರೂ ಅಂತಿಮ ಕ್ಷಣದ ಬದಲಾವಣೆಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಮತ್ತೊಂದೆಡೆ ಬಿಜೆಪಿ ಕೂಡಾ ಟಿಆರ್ ಎಸ್ ಗೆ ಬೆಂಬಲಿಸುವ ಸೂಚನೆ ನೀಡಿದೆ. ಒಂದು ವೇಳೆ ಸಮೀಕ್ಷೆ ಅನ್ವಯ ಒಟ್ಟು 119 ಕ್ಷೇತ್ರಗಳ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಟಿಆರ್ ಎಸ್ ಜೊತೆಗೂಡಿ ಸರ್ಕಾರ ರಚಿಸುವ ಬಿಜೆಪಿ ಪ್ಲ್ಯಾನ್ ಆಗಿದೆ. ಇತ್ತ ಕಾಂಗ್ರೆಸ್ ಕೂಡಾ ಅತಂತ್ರ ಸ್ಥಿತಿ ನಿರ್ಮಾಣವಾದರೆ ಲಾಭ ಪಡೆಯಲು ಚಿಂತಿಸಿದ್ದು, ಇದಕ್ಕಾಗಿ ಅಸಾದುದ್ದಿನ್ ಓವೈಸಿಯನ್ನು ಸಂಪರ್ಕಿಸಿದೆ. 

ತೆಲಂಗಾಣದಲ್ಲಿ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆದಿದೆ. ಆದರೀಗ ಫಲಿತಾಂಶದಂದು ಒಂದೆಡೆ ಓವೈಸಿ ಟಿಆರ್ ಎಸ್ ಬೆಂಬಲಕ್ಕೆ ನಿಂತರೆ, ಕಾಂಗ್ರೆಸ್ ಓವೈಸಿ ಬೆನ್ನಿಗೆ ಬಿದ್ದಿದೆ. ಅತ್ತ ಬಿಜೆಪಿ ಕೂಡಾ ಟಿಆರ್ ಎಸ್ ಗೆ ಬೆಮಬಲಿಸುವ ಸೂಚನೆ ನೀಡಿದೆ. ಒಟ್ಟಾರೆಯಾಗಿ ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳು ಹರಸಾಹಸ ನಡೆಸುತ್ತಿರುವುದು ಮಾತ್ರ ಸ್ಪಷ್ಟ.