ಮುಂಬೈ :  ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರದ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಖಲಿಸ್ತಾನ ಉಗ್ರಗಾಮಿ ಬಂಧಿಸಲಾಗಿದೆ. ಈ ಪೈಕಿ ಓರ್ವನನ್ನು ಕರ್ನಾಟಕದ ಹರ್‌ಪಾಲ್‌ಸಿಂಗ್‌ ನಗ್ರಾ (42) ಎಂದು ಗುರುತಿಸಲಾಗಿದೆ. ಈತ ಮೂಲತಃ ಪಂಜಾಬ್‌ನವನಾದರೂ ಹಾಲಿ ಬಳ್ಳಾರಿ ವಾಸಿ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಗ್ರಾನನ್ನು ಪುಣೆ ಜಿಲ್ಲೆಯ ಚಕಾನ್‌ನಲ್ಲಿ ಎಟಿಎಸ್‌ ಸಿಬ್ಬಂದಿ ಡಿಸೆಂಬರ್‌ 2ರಂದೇ ಬಂಧಿಸಿದ್ದಾರೆ. ಈತ ನೀಡಿದ ಸುಳಿವಿನ ಮೇರೆಗೆ ಮತ್ತೋರ್ವನನ್ನು ಪಂಜಾಬ್‌ನಲ್ಲಿ ಸೆರೆಹಿಡಿಯಲಾಗಿದೆ. ಇವರು ಉಗ್ರ ಸಂಘಟನೆಯ ಬೆಂಬಲಿಗರಾಗಿದ್ದು, ಪಾಕಿಸ್ತಾನದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಜತೆ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ. ಬಂಧಿತರಿಂದ ಪಿಸ್ತೂಲ್‌ ಮತ್ತು 5 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗ್ರಾನನ್ನು ವಿಚಾರಣೆಗೆ ಒಳಪಡಿದ ಸಂದರ್ಭದಲ್ಲಿ ಈತ, ಸ್ವತಂತ್ರ ಖಲಿಸ್ತಾನ ದೇಶ ಸ್ಥಾಪನೆ ಆಗಬೇಕು ಎಂಬ ಹೋರಾಟದ ಬೆಂಬಲಿಗನಾಗಿದ್ದ. ಇದಕ್ಕಾಗಿ ಅಂತರ್ಜಾಲದ ಮೂಲಕ ಶಸ್ತ್ರಾಸ್ತ್ರ ಕ್ರೋಡೀಕರಿಸುತ್ತಿದ್ದರು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಖಲಿಸ್ತಾನಿ ತೀವ್ರವಾದಿತ್ವದ ಕಡೆಗೆ ಸೆಳೆಯುತ್ತಿದ್ದರು ಎಂದು ತಿಳಿದುಬಂದಿದೆ.

ಎರಡನೇ ಶಂಕಿತ ಉಗ್ರನನ್ನು ಈತನ ಸುಳಿವಿನ ಮೇರೆಗೆ ಬಂಧಿಸಿ ಈಗ ಮುಂಬೈಗೆ ಕರೆತರಲಾಗುತ್ತಿದೆ ಎಂದು ಎಟಿಎಸ್‌ ಮೂಲಗಳು ಹೇಳಿವೆಯಾದರೂ, ಆತನ ಹೆಸರು ಬಹಿರಂಗಪಡಿಸಲು ನಿರಾಕರಿಸಿವೆ.

ಎಟಿಎಸ್‌ ತಂಡವು ನಗ್ರಾ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ 20ರ ಪ್ರಕಾರ (ಒಂದು ಉಗ್ರಗಾಮಿ ತಂಡದ ಸದಸ್ಯನಾಗಿದ್ದ ಹಿನ್ನೆಲೆ) ಪ್ರಕರಣ ದಾಖಲಿಸಿದೆ.  ಮುಂಬೈ ಕೋರ್ಟ್‌ಗೆ ನಗ್ರಾನನ್ನು ಸೋಮವಾರ ಹಾಜರು ಮಾಡಲಾಗಿದ್ದು, ಡಿ.17ರವರೆಗೆ ಎಟಿಎಸ್‌ ವಶಕ್ಕೆ ಒಪ್ಪಿಸಿದೆ.