ಬಸ್ ಟಿಕೆಟ್ ದರ ಹೆಚ್ಚಿಸಲು ರಾಜ್ಯಕ್ಕೆ ಮಹಾರಾಷ್ಟ್ರ ಪತ್ರ!| ‘ಬೆಂಗಳೂರು-ಮುಂಬೈ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಸಿ’
ಬೆಂಗಳೂರು[ಸೆ.10]: ಬೆಂಗಳೂರು-ಮುಂಬೈ ಮಾರ್ಗದಲ್ಲಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಹೈಟೆಕ್ ವೋಲ್ವೋ ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ(ಎಂಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಸಾರಿಗೆ ನಿಗಮದ ಹವಾನಿಯಂತ್ರಿತ ಬಸ್‌ನಲ್ಲಿ ಮುಂಬೈ-ಬೆಂಗಳೂರು ಮಾರ್ಗದ ಪ್ರಯಾಣಕ್ಕೆ 1,874 ರು. ದರ ನಿಗದಿ ಮಾಡಲಾಗಿದೆ. ಆದರೆ, ಇದೇ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಕಾರ್ಯಾಚರಣೆ ಮಾಡುವ ಹೈಟೆಕ್ ವೋಲ್ವೋ ಬಸ್ ಪ್ರಯಾಣ ದರ 1,260 ರು. ಪಡೆಯಲಾಗುತ್ತಿದೆ. ಹೀಗೆ ಪ್ರಯಾಣ ದರ ಕಡಿಮೆ ಪಡೆಯುವುದು ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳ ನಡುವಿನ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಎಂಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಸಿಂಗ್ ಡಿಯೋಲ್ ಪತ್ರದಲ್ಲಿ ಆಕ್ಷೇಪ ಎತ್ತಿದ್ದಾರೆ.
ಪ್ರಯಾಣಿಕರು ಹಾಗೂ ಸಾರಿಗೆ ನಿಗಮದ ದೃಷ್ಟಿಯಿಂದ ಕೂಡಲೇ ಈ ಬಗ್ಗೆ ಗಮನ ಹರಿಸಿ, ಮಹಾರಾಷ್ಟ್ರ ಸಾರಿಗೆ ನಿಗಮದ ಪ್ರಯಾಣ ದರಕ್ಕೆ ಸಮಾನಾಂತರವಾಗಿ ಕೆಎಸ್‌ಆರ್‌ಟಿಸಿ ಬಸ್‌ನ ಪ್ರಯಾಣದ ದರ ಹೆಚ್ಚಳ ಮಾಡುವಂತೆ ಕೋರಿದ್ದಾರೆ.
