ಬೆಳಗಾವಿ(ಸೆ. 23): ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯಿನಾ ಹಾಗೂ ಕೊಲ್ಹಾಪುರ ಜಿಲ್ಲೆಯ ರಾಜಾಪೂರ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. 50 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರದ ಗಮನಕ್ಕೆ ತಾರದೇ ಏಕಾಏಕಿ ನೀರು ಬಿಡಗಡೆ ಮಾಡುತ್ತಿರುವ ಕಾರಣದಿಂದ 50ಕ್ಕೂ ಹೆಚ್ಚು ರೈತರ ಪಂಪಸೆಟ್'ಗಳು ನದಿ ನೀರಲ್ಲಿ ಕೊಚ್ಚಿ ಹೋಗಿವೆ. ಬಾಗಲಕೊಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡಲಾಗುತ್ತಿದೆ. ಮಹಾರಾಷ್ಟ್ರ ಯಾವುದೇ ಮುನ್ಸೂಚನೆ ನೀಡದೆ ನೀರು ಬಿಟ್ಟಿರುವುದು ಇಲ್ಲಿನ ರೈತ ಆಕ್ರೋಶಕ್ಕೆ ಕಾರಣವಾಗಿದೆ.